ಅರಸೀಕೆರೆ ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಅರುಣ್ ಕುಮಾರ್, ಧರ್ಮಶೇಖರ್, ಮೋಹನ್ ಕುಮಾರ್ ಇತರರಿದ್ದಾರೆ. 
ಹಾಸನ

ಜೇನುಕಲ್ ಕ್ರೀಡಾಂಗಣದಲ್ಲಿ ಧ್ವಜಾರೋಹಣ

ಎ. ಆರ್. ರಘುರಾಮ

ಅರಸೀಕೆರೆ :

ಹಲವರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಈ ಐತಿಹಾಸಿಕ ಕ್ಷಣವನ್ನು ಎಂದಿಗೂ ಮರೆಯುವಂತಿಲ್ಲ ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಹೇಳಿದರು.

ನಗರದ ಜೇನುಕಲ್ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರು ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಲಾಭ ಪಡೆದು ಒಂದೂವರೆ ಶತಮಾನ ಆಳ್ವಿಕೆ ನಡೆಸಿದ್ದಾರೆ. ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಸೇರಿದಂತೆ ಸಹಸ್ರಾರು ನೇತಾರರು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಹಲವರ ಬಲಿದಾನವಾಗಿದೆ. 80 ವರ್ಷಗಳ ಅವಧಿಯಲ್ಲಿ ಸವಾಲಿನ ನಡುವೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು. ಯುವ ಪೀಳಿಗೆ ಸ್ವಾತಂತ್ರ್ಯವನ್ನು ಸಂಭ್ರಮಿಸಬೇಕೆ ಹೊರತು ಸ್ವೇಚ್ಛೆಗೆ ಬಳಸಬಾರದು ಎಂದು ಸಲಹೆ ನೀಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್. ಅರುಣ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ಬಿಇಒ ಮೋಹನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಪುರಸ್ಕರಿಸಲಾಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನಸೆಳೆದವು. ಲೋಕೋಪಯೋಗಿ, ನಗರಸಭೆ, ಸೆಸ್ಕ್ ಕಚೇರಿ, ಪತ್ರಕರ್ತರ ಸಂಘ ಒಳಗೊಂಡಂತೆ ನಗರದೆಲ್ಲೆಡೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಕಂಡುಬಂದಿತು.