ಆಲೂರು ತಾಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮಾದೇವರ ಹಳ್ಳಿಯ ಮುಖ್ಯ ರಸ್ತೆ ಹಾಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ ಚೆನ್ನಕೇಶವ ದೇವಾಲಯದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ ನೆರವೇರಿಸಿದರು. ಮಾವನೂರು ಮೋಹನ್, ಅಬನ ಕೃಷ್ಣಮೂರ್ತಿ, ಪಿಡಿಒ ಶಂಭುಲಿಂಗ ಹಾಜರಿದ್ದರು.
- ಶಾಸಕ ಸಿಮೆಂಟ್ ಮಂಜುನಾಥ್ ಹೇಳಿಕೆ
- ಕಾಮಗಾರಿಗೆ ಭೂಮಿಪೂಜೆ
ಆಲೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಏಕಮಾತ್ರ ಧ್ಯೇಯ. ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ತಿಳಿಸಿದರು.
ತಾಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮಾದೇವರ ಹಳ್ಳಿಯ ಮುಖ್ಯ ರಸ್ತೆ ಹಾಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ ಚೆನ್ನಕೇಶವ ದೇವಾಲಯದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಸಾಕಷ್ಟು ಕಡೆಗಳಲ್ಲಿ ಹತ್ತಾರು ವರ್ಷಗಳಿಂದ ಡಾಂಬರು ಕಾಣದ ಗುಂಡಿ ರಸ್ತೆಗಳೇ ಇವೆ. ಎಲ್ಲ ರಸ್ತೆಗಳ ಅಭಿವೃದ್ಧಿಗೆ ಹಾಗೂ ಶಿಥಿಲಗೊಂಡಿರುವ ದೇವಾಲಯಗಳ ಮರು ನಿರ್ಮಾಣ ಮಾಡಬೇಕಾದರೆ. ಇದಕ್ಕೆ ಕನಿಷ್ಠ 500 ಕೋಟಿ ರೂ. ಅಗತ್ಯವಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ನನ್ನ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಆದರೂ ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಅಲ್ಪ ಸ್ವಲ್ಪ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದು ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಅದ್ಯತೆ ನೀಡಿ ರಸ್ತೆ ಮತ್ತು ದೇವಾಲಯಗಳ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದೇನೆ. ಶಾಸಕರಿಗೆ ನೀಡುತ್ತಿರುವ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ಪ್ರತಿಯೊಂದು ಗ್ರಾಮಕ್ಕೂ ತಲಾ 10 ಲಕ್ಷ ರೂಪಾಯಿಗಳಂತೆ ಹಂಚಿಕೆ ಮಾಡಿ ಗ್ರಾಮಗಳಲ್ಲಿ ತೀರಾ ಹದಗೆಟ್ಟಿರುವ ರಸ್ತೆ ಹಾಗೂ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಚುನಾವಣಾ ಪೂರ್ವದಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿ ನಾನು ಭರವಸೆ ನೀಡಿದ್ದೆ. ಅದರಂತೆ ಇಂದು ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಈ ಬಾರಿ ನಾನು ಶಾಸಕನಾಗಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 2028ಕ್ಕೆ ಬಿಜೆಪಿ ಮೈತ್ರಿ ಸರ್ಕಾರ ಬರುವುದು ಸೂರ್ಯ ಚಂದ್ರರು ಉದಯಿಸುವಷ್ಟೇ ಸತ್ಯ. ಆದ್ದರಿಂದ ತಾಲೂಕಿನ ಜನರು ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಿದರೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ಧ್ರುವ ಕಣಗಾಲ್, ಬಿಜೆಪಿ ವಕ್ತಾರ ಮಾವನೂರು ಮೋಹನ್, ಕಾರ್ಯದರ್ಶಿ ನಟರಾಜ್, ಬಿಜೆಪಿ ಮುಖಂಡರಾದ ಹೊಳೆ ಬೆಳ್ಳೂರು ಕಿರಣ್, ಕೇಶವ, ಗ್ರಾಮ ಪಂಚಾಯಿತಿ ಪಿಡಿಒ ಶಂಭುಲಿಂಗ, ಸಹಾಯಕ ಇಂಜಿನಿಯರ್ ಅರುಣ್ ಕುಮಾರ್, ಬಿಜೆಪಿ ಕಾರ್ಯಕರ್ತರಾದ ಜಯರಾಮ್, ಕೇಶವಮೂರ್ತಿ, ಜಿಲ್ಲಾ ಅರಸು ಸಂಘದ ಅಧ್ಯಕ್ಷ ಯೋಗರಾಜ್ ಅರಸು ಹಾಜರಿದ್ದರು.