ಹಿರೀಸಾವೆ ಶ್ರೀಕಂಠಯ್ಯ ವೃತ್ತದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಬಸ್ ತಂಗುದಾಣ ಕಾಮಗಾರಿಗೆ ಸಂಸದ ಶ್ರೇಯಸ್ ಪಟೇಲ್ ಬುಧವಾರ ಭೂಮಿಪೂಜೆ ನೆರವೇರಿಸಿದರು. ಮಾರುತಿ ಮಂಜುನಾತ್, ಶಂಕರ್, ಚೇತನ್, ಬಿ.ಆರ್.ಪ್ರಕಾಶ್, ಪುನೀತ್ ಇತರರಿದ್ದರು.
ಸಂಸದ ಶ್ರೇಯಸ್ ಪಟೇಲ್ ಭರವಸೆ
ಹಿರೀಸಾವೆ: ವಾಣಿಜ್ಯ ಕೇಂದ್ರಭಾಗ ಹಾಗೂ ಜನವಸತಿಯೊಂದಿಗೆ ತಾಲೂಕು ಮಟ್ಟಕ್ಕೆ ಬೆಳೆದಿರುವ ಹಿರೀಸಾವೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪ್ರಮುಖ ಸೌಲಭ್ಯಗಳ ಅಗತ್ಯವಿದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.
ಪಟ್ಟಣದ ಶ್ರೀಕಂಠಯ್ಯ ವೃತ್ತದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದ ಪ್ರಯಾಣಿಕರ ತಂಗುದಾಣ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಗಮನ ಸೆಳೆದು ಅಗ್ನಿಶಾಮಕ ಠಾಣೆಯನ್ನು ಹಿರೀಸಾವೆಯಲ್ಲಿ ಶೀಘ್ರ ಆರಂಭಿಸಲಾಗುವುದು ಎಂದರು.
ಇತ್ತೀಚಿನ ವರ್ಷಗಳಿಂದ ಹಿರೀಸಾವೆ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಅಗ್ನಿಶಾಮಕ ಠಾಣೆ ಅಗತ್ಯವಿದೆ. ಶೀಘ್ರದಲ್ಲಿಯೇ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು-ಹಾಸನ ರೈಲ್ವೆ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ಕೆಲವು ರೈಲು ನಿಲುಗಡೆ ಹಾಗೂ ರಾಷ್ಟ್ರೀಯ ಹೆದ್ದಾರಿ-75 ರ ಅಂಬೇಡ್ಕರ್ ವೃತ್ತ ಸೇರಿದಂತೆ ಹಲವು ಕಡೆ ಅಂಡರ್‌ಪಾಸ್ ನಿರ್ಮಾಣ ಮಾಡಿಕೊಡುವಂತೆ ಸಂಸದರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿ-75 ರ ಕೆಲವು ಕಡೆ ಅಂಡರ್‌ಪಾಸ್ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಲಾಗುವುದು. ರೈಲುಗಳ ನಿಲುಗಡೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಸಂಸದರು ಭರವಸೆ ನೀಡಿದರು.
ರಾಜ್ಯ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಎಚ್.ಸಿ.ಲಲಿತ್ ರಾಘವ್ ಮಾತನಾಡಿ, ಜುಲೈ 18ಕ್ಕೆ ತಾತನವರಾದ ಮಾಜಿ ಸಚಿವ ದಿ.ಶ್ರೀಕಂಠಯ್ಯ ಅವರ ಜನ್ಮಶತಮಾನೋತ್ಸವನ್ನು ಆಯೋಜಿಸಲಾಗುವುದು ಎಂದರು.
ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಇಬ್ಬರು ಯುವ ನಾಯಕರಾಗಿದ್ದು, ಬಡವರ ಪರವಾದ ಕೆಲಸ ಮಾಡಿ. ತಾತಂದಿರ ಹೆಸರನ್ನು ಉಳಿಸಿ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಮಂಜುನಾಥ್, ಶಂಕರ್, ಚೇತನ್, ಬಿ.ಆರ್.ಪ್ರಕಾಶ್, ಪುನಿತ್, ಕಾಂಗ್ರೆಸ್ ಮುಖಂಡರಾದ ಯುವರಾಜ್, ಎಚ್.ಎಂ. ರಘು, ಉದಯಕುಮಾರ್, ಎಚ್.ಆರ್. ಬಾಲಕಷ್ಣ, ಬ್ಯಾಡರಹಳ್ಳಿ ಯೋಗೇಶ್, ಮುರುಳೀಧರ್, ಶ್ರೀಧರ್, ಬ್ಯಾಂಗಲ್ ಮಹೇಶ್, ಜಿನ್ನೇನಹಳ್ಳಿ ರಾಮೇಗೌಡ, ಆಕರ್ಷ, ಚಿಕ್ಕರಾಮೇಗೌಡ, ಪೈಲ್ವಾನ್ ಕಿಟ್ಟಿ, ಕಾಂತರಾಜು, ವಾಸು, ಪುಟ್ಟಸ್ವಾಮಿ, ನಂಜೇಗೌಡ, ಕೊಳ್ಳೇನಹಳ್ಳಿ ಶ್ರೀಧರ್, ರಾಶಿ ಗೌಡ, ರಂಗಸ್ವಾಮಿ ಇತರರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.