- 141 ಕಂದಾಯ ಇಲಾಖೆ ನೌಕರರ ವಿರುದ್ಧ ಎಫ್‌ಐಆರ್
- ಹೇಮಾವತಿ ಸಂತ್ರಸ್ತರ ಜಮೀನು ನುಂಗಿದ ಪ್ರಕರಣ
- ಬಂಧನದ ಭೀತಿಯಲ್ಲಿ ಹಲವರು ನಾಪತ್ತೆ
ಹಾಸನ: ಹೇಮಾವತಿ ಪುನರ್ವಸತಿ ಯೋಜನೆಯಡಿ ಸರ್ಕಾರ ಸಂತ್ರಸ್ತರಿಗೆ ಕೊಟ್ಟ ಜಮೀನನ್ನೇ ಪ್ರಭಾವಿಗಳು ನುಂಗಿದ ಪ್ರಕರಣದಲ್ಲಿ ಇದೀಗ ಕಂದಾಯ ಇಲಾಖೆಯ 141 ನೌಕರರ ವಿರುದ್ದ ಎ್ಐಆರ್ ದಾಖಲಾಗಿದೆ.
ಬಂಧನದ ಭೀತಿಯಿಂದ ಬಹುತೇಕ ನೌಕರರು ನಾಪತ್ತೆಯಾಗಿದ್ದಾರೆ. 1971ರಲ್ಲಿ ಹೇಮಾವತಿ ಜಲಾಶಯ ಯೋಜನೆಗೆ ಭೂಮಿ ಕಳೆದುಕೊಂಡ ಸುಮಾರು 10,000 ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಪುನರ್ವಸತಿಗೆ ಜಮೀನು ನೀಡಿತ್ತು. ಆದರೆ ಕಳೆದ 50 ವರ್ಷಗಳಲ್ಲಿ ಈ ಜಮೀನಿನಲ್ಲಿ ದೊಡ್ಡ ಅಕ್ರಮ ನಡೆದಿದೆ. ಪ್ರಭಾವಿಗಳು, ರಾಜಕಾರಣಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಸಂತ್ರಸ್ತರ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಕ್ರಮದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಡಿಸಿಆರ್‌ಬಿಗೂ ಅರ್ಜಿ ಸಲ್ಲಿಸಲಾಗಿದೆ. ತನಿಖೆಯಲ್ಲಿ ಕಂದಾಯ ಇಲಾಖೆಯ 141 ನೌಕರರ ಪಾತ್ರ ಬೆಳಕಿಗೆ ಬಂದಿದೆ. ಇವರಲ್ಲಿ ಸಕಲೇಶಪುರ ತಾಲೂಕಿನ 50 ಸಿಬ್ಬಂದಿ ಇದ್ದಾರೆ. ಉಳಿದವರು ಜಿಲ್ಲೆಯ ವಿವಿಧ ತಾಲೂಕಿನವರು.
ಎಫ್‌ಐಆರ್ ಆದ ಬಳಿಕ ಬಂಧನ ಭೀತಿಯಿಂದ ಬಹಳಷ್ಟು ನೌಕರರು ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದಾರೆ. ಕೆಲವರು ರಜೆ ಹಾಕಿದ್ದಾರೆ, ಇನ್ನು ಕೆಲವರು ನಾಪತ್ತೆ ಆಗಿದ್ದಾರೆ. ಇದರಿಂದ ಸಾರ್ವಜನಿಕರ ಕೆಲಸಗಳು ಕೂಡ ಸ್ಥಗಿತವಾಗಿವೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ರಕ್ಷಿಸುವುದಿಲ್ಲ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹೇಮಾವತಿ ಪುನರ್ವಸತಿ ಯೋಜನೆಗೆ ನಿಜವಾಗಿಯೂ ಅರ್ಹರಿಗೆ ನ್ಯಾಯ ಸಿಗುತ್ತಾ ಎಂಬ ಅನುಮಾನ ಮೂಡಿದೆ. ಒಟ್ಟಿನಲ್ಲಿ ಸಂತ್ರಸ್ತರಿಗೆ ಆಸರೆಯಾಗಬೇಕಿದ್ದ ಸರ್ಕಾರಿ ಯೋಜನೆಯೇ ಭ್ರಷ್ಟಾಚಾರದ ತಾಣವಾಗಿದೆ.
ಹೇಮಾವತಿ ಪುನರ್ವಸತಿ ಯೋಜನೆಯಲ್ಲಿ ಅಕ್ರಮ ಎಸಗಿದ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಬೇಕಿದೆ.
ಪುನರ್ವಸತಿ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ
ನೈಜ ಮುಳುಗಡೆ ಹಲವು ಸಂತ್ರಸ್ತರಿಗೆ ಇನ್ನು ಭೂಮಿ ಸಿಕ್ಕಿಲ್ಲ. ಎಚ್.ಆರ್.ಪಿ. ಹಗರಣದಲ್ಲಿರುವ ಆರೋಪಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಬೇಕು. ನೈಜ ಆರೋಪಿಗಳ ವಿರುದ್ಧ ಕ್ರಮ ಆಗಲಿ.