ಚನ್ನರಾಯಪಟ್ಟಣದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಚನ್ನರಾಯಪಟ್ಟಣ: ಪಟ್ಟಣದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಿದರು.
ಸಂಚಾರ ಪಿಎಸ್‌ಐ ಬಿ.ಎಂ.ಚರಣ್ ಗೌಡ ಮತ್ತು ಕೃಷ್ಣ ನಾಯಕ್ ಅವರ ನೇತೃತ್ವದ ಪಟ್ಟಣದ ಆಸ್ಪತ್ರೆ ವೃತ್ತ, ಕೃಷ್ಣರಾಜೇಂದ್ರ ವೃತ್ತ ಹಾಗೂ ನವೋದಯ ವೃತ್ತದಲ್ಲಿ ಸಂಚಾರ ನಿಯಮ ಪಾಲನೆಯಿಂದ ಆಗುವ ಪ್ರಯೋಜನಗಳ ಕುರಿತು ಜನರಿಗೆ ಜಾಗೃತಿ ಮೂಡಿಸಿದರು. ನಿಯಮಗಳನ್ನು ಮೀರಿದರೆ ವಿಧಿಸುವ ದಂಡದ ಕುರಿತು ದ್ವಿಚಕ್ರ ವಾಹನ ಮಾಲೀಕರಿಗೆ ತಿಳಿ ಹೇಳಿದರು.
ಪರವಾನಗಿ ಇಲ್ಲದೆ ವಾಹನ ಚಾಲನೆ, ಅಪ್ರಾಪ್ತರಿಗೆ ವಾಹನ ನೀಡುವ ಪಾಲಕರಿಗೆ ಶಿಕ್ಷೆ ಸಮೇತ ದಂಡ, ಪರವಾನಗಿ ಅನರ್ಹಗೊಂಡ ಅವಧಿಯಲ್ಲಿ ವಾಹನ ಚಾಲನೆ, ಅತಿ ವೇಗದ ಚಾಲನೆ, ಅಪಾಯಕಾರಿಯಾಗಿ ಚಾಲನೆ, ನೋಂದಣಿ ಇಲ್ಲದ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ವಿಮೆ ಮತ್ತು ತುರ್ತು ಸೇವೆಯ ವಾಹಗಳಿಗೆ ದಾರಿ ಬಿಡದಿದ್ದರೆ ದಂಡ ವಿಧಿಸುವ ಕುರಿತು ಪೊಲೀಸರು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಲಕ್ಷಾಂತರ ರೂ. ಖರ್ಚು ಮಾಡಿ ಹೊಸ ದ್ವಿಚಕ್ರ ವಾಹನ ಖರೀದಿಸುತ್ತೀರಿ. ಆದರೆ ಕೇವಲ 500-1000 ರೂ. ಮೌಲ್ಯದ ಹೆಲ್ಮೆಟ್ ಖರೀದಿಸಲು ಹಿಂದೇಟು ಹಾಕಬಾರದು. ಹೆಲ್ಮೆಟ್ ಇಲ್ಲದೆ ವಾಹನದ ಚಾಲನೆ ಅಪಾಯಕಾರಿ ಮತ್ತು ಕಾನೂನು ಪ್ರಕಾರ ಅಪರಾಧವಾಗಿದ್ದು, ಅದಕ್ಕಾಗಿ 500 ರೂ. ದಂಡ ವಿಧಿಸಲಾಗುವುದು ತಿಳಿಸಿ, ಹೆಲ್ಮೆಟ್ ಧರಿಸಿ 500 ರೂ. ಉಳಿಸಿ ಎಂದು ಜಾಗೃತಿ ಮೂಡಿಸಿದರು. ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡುತ್ತಿದ್ದ 75ಕ್ಕೂ ಅಧಿಕ ಸವಾರರಿಗೆ ತಲಾ 500 ರೂ. ದಂಡ ವಿಧಿಸಿದರು.
ಎಎಸ್‌ಐ ಬೋರೇಗೌಡ, ಲಿಂಗೇಗೌಡ, ಸಿಬ್ಬಂದಿ ಯೋಗೇಂದ್ರ, ಅನುಕುಮಾರ್, ರವಿಕುಮಾರ್, ಶಿವಾನಂದ್ ಮತ್ತಿತರರು ಭಾಗವಹಿಸಿದ್ದರು.