ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಹಾಸನದ ಕೆಲವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ರಂಗೇನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಲು ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಖಜಾಂಚಿ ಸುಭಾಷ್, ಸಿದ್ದೇಶ್, ಸಣ್ಣೇಗೌಡ, ಚೈತ್ರಾ, ಅಭಿಷೇಕ್, ಕಾರ್ಯದರ್ಶಿ ಸುಷ್ಮಾ ಇತರರಿದ್ದರು.
- ಸರ್ಕಾರಿ ಶಾಲೆ ಉಳಿವಿಗಾಗಿ ಹೋರಾಟ
- ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ
ಹಾಸನ: ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಹಾಸನದ ಕೆಲವತ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ರಂಗೇನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಲು ಎಐಡಿಎಸ್‌ಒ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಎಐಡಿಎಸ್‌ಒ ಖಜಾಂಚಿ ಸುಭಾಷ್ ಮಾತನಾಡಿ, ಸರ್ಕಾರ ಕೆಪಿಎಸ್-ಮ್ಯಾಗ್ನೆಟ್ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಮಾಡುತ್ತೇವೆ ಎಂದು ಹೇಳಿ 40 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಹೊರಟಿದೆ. ಕೆಲವತ್ತಿ ಶಾಲೆಯಲ್ಲಿ 25 ಮಕ್ಕಳು, ರಂಗೇನಹಳ್ಳಿಯಲ್ಲಿ 11 ಮಕ್ಕಳು ಓದುತ್ತಿದ್ದಾರೆ. ಈ ಶಾಲೆಗಳು ಉಳಿದರೆ ಮಾತ್ರ ಅವರಿಗೆ ಶಿಕ್ಷಣ ದೊರೆಯುತ್ತದೆ ಎಂದರು.
ಸರ್ಕಾರ ವ್ಯವಸ್ಥಿತವಾಗಿ ಬಡವರು, ರೈತ ಮಕ್ಕಳ ಶಿಕ್ಷಣವನ್ನು ಕಸಿಯುವ ಹುನ್ನಾರ ಮಾಡುತ್ತಿದೆ. ಶಿಕ್ಷಣ ಸಚಿವರು ನಮ್ಮ ರಕ್ತದಲ್ಲಿ ಕನ್ನಡವಿದೆ. ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಕೂಡ ಮುಚ್ಚುವುದಿಲ್ಲ ಎಂದು ಸದನದಲ್ಲಿ ಹೇಳಿ ಹಿಂದೆಯಿಂದ ಆದೇಶವನ್ನು ಹೊರಡಿಸಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅಧಿಕಾರ ನಡೆಸಿವೆ. ಈ ಎಂಟು ವರ್ಷಗಳಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡದೆ ಖಾಸಗಿ ಶಾಲೆಗಳ ಪರ ಕೆಲಸ ಮಾಡಿದ್ದಾರೆ. 60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇವೆ. 21 ಸಾವಿರಕ್ಕೂ ಹೆಚ್ಚಿಗೆ ಕೊಠಡಿಗಳು ದುರಸ್ತಿಯಾಗಿಲ್ಲ. ಇನ್ನೂ ಹಲವಾರು ಸಮಸ್ಯೆಗಳು ಸರ್ಕಾರಿ ಶಾಲೆಗಳಲ್ಲಿ ಇವೆ. ಈ ಸಮಸ್ಯೆಗಳನ್ನು ಮೊದಲು ಪರಿಹರಿಸಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥರಾದ ಸಿದ್ದೇಶ್, ಊರಿನ ಹಿರಿಯರಾದ ಸಣ್ಣೇಗೌಡ, ಜಿಲ್ಲಾಧ್ಯಕ್ಷರಾದ ಚೈತ್ರಾ, ಅಭಿಷೇಕ್, ಕಾರ್ಯದರ್ಶಿ ಸುಷ್ಮಾ, ಜಂಟಿ ಕಾರ್ಯದರ್ಶಿ ಪುರುಷೋತ್ತಮ್, ಕಾರ್ಯಕರ್ತರಾದ ರಾಕೇಶ್, ಪ್ರಶಾಂತ್, ಪರಶುರಾಮ್, ಪ್ರೀತಮ್, ಧನಂಜಯ್, ಧನರಾಜ್, ಅಭಿಷೇಕ್ ಕೆಲವತ್ತಿ, ಸಿದ್ದೇಶ್, ಸಣ್ಣೆಗೌಡ ಇತರರು ಇದ್ದರು.