ಹೊರ ರಾಜ್ಯದ ಯುವಕರು ಹಾಗೂ ಸ್ಥಳೀಯ ಅಪ್ರಾಪ್ತರ ನಡುವೆ ಹನುಮಂತ ಪುರದಲ್ಲಿ ನಡೆದಿರುವ ಮಾರಾಮಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
- ನೆರೆ ರಾಜ್ಯದವರು, ಸ್ಥಳೀಯರ ನಡುವೆ ಹೊಡೆದಾಟ
- ದೃಶ್ಯ ಸಿಸಿ ಟಿವಿಯಲ್ಲಿ ಸೆರೆ, ದೂರು ದಾಖಲು
- ಎರಡೂ ಕಡೆಯವರಿಗೆ ಎಚ್ಚರಿಕೆ ನೀಡಿದ ಪೊಲೀಸರು
ಹಾಸನ: ಹೊರ ರಾಜ್ಯದ ಯುವಕರು ಹಾಗೂ ಸ್ಥಳೀಯ ಅಪ್ರಾಪ್ತರ ನಡುವೆ ತಾಲೂಕಿನ ಹನುಮಂತಪುರದಲ್ಲಿ ಹೊಡೆದಾಟ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾ.13 ರಂದು ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ದೊಡ್ಡ ರಿಪೀಸ್ ಪಟ್ಟಿಗಳಿಂದ ವಯಸ್ಕರು ಹಾಗೂ ಅಪ್ರಾಪ್ತರ ಗುಂಪು ಪರಸ್ಪರ ಬಡಿದಾಡಿಕೊಂಡಿರುವ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಹೊಡೆದಾಟದಲ್ಲಿ ಭಾಗಿಯಾಗಿದ್ದವರು ಪಶ್ಚಿಮ ಬಂಗಾಳದವರು ಎನ್ನಲಾದ ಸೌರವ್ ಘೋಷ್ ಹಾಗೂ ಕಿರಣ್ ಘೋಷ್ ಎಂಬುವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರು ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಗೊರೂರು ರಸ್ತೆಯ ಪೆರುಮೇನಹಳ್ಳಿ ಗ್ರಾಮದಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದಾರೆ.
ಮಾ.13 ರ ರಾತ್ರಿ ರೂಂಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುವಾಗ ಈ ಗಲಾಟೆ ನಡೆದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡೂ ಕಡೆಯವರನ್ನು ಕರೆಸಿ ಪೊಲೀಸರು ಎಚ್ಚರಿಕೆ ನೀಡಿ ಕಳಿಸಿದ್ದಾರೆ.