ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಗುರುವಾರ ಚನ್ನರಾಯಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾರ್ಮಿಕರ ಸಂಘಟನೆ ಪ್ರತಿಭಟನೆ ನಡೆಸಿತು. ಎಚ್.ಎಸ್.ಮಂಜುನಾಥ್, ಜಯಲಕ್ಷ್ಮೀ, ನಾಗರತ್ನ, ತೇಜಸ್ ಗೌಡ, ಚಂದ್ರೇಗೌಡ ಇತರರು ಇದ್ದರು.
- ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ
ಚನ್ನರಾಯಪಟ್ಟಣ: ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಗುರುವಾರ ಪಟ್ಟಣದ ಆಸ್ಪತ್ರೆ ವೃತ್ತದಲ್ಲಿ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಇದಕ್ಕೂ ಮೊದಲು ತಾಲೂಕು ಕಚೇರಿ ಮುಂಭಾಗ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಸಿಎಟಿಯು ಜಿಲ್ಲಾ ಮುಖಂಡ ಎಚ್.ಎಸ್.ಮಂಜುನಾಥ್ ಮಾತನಾಡಿ, ಕಳೆದ 12 ವರ್ಷಗಳಿಂದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಎಲ್ಲ ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಆರೋಪಿಸಿದರು.
ಬಂಡವಾಳಶಾಹಿಗಳಿಗೆ ಪರವಾದ ಮತ್ತು ಕಾರ್ಮಿಕರಿಗೆ ಮಾರಕವಾದ ನೀತಿಗಳನ್ನು ಕೇಂದ್ರ ಸರ್ಕಾರ ಅನುಸರಿಸುತ್ತದೆ. ನಾಲ್ಕು ಕಾರ್ಮಿಕ ಸಂಹಿತೆಗಳು ಯುವಜನತೆ ಮತ್ತು ಶ್ರಮಿಕ ವರ್ಗವನ್ನು ಆಧುನಿಕ ಗುಲಾಮಗಿರಿಗೆ ತಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ನೀತಿಗಳನ್ನು ಹಿಂಪಡೆದುಕೊಳ್ಳಬೇಕು, ರಾಜ್ಯ ಸರ್ಕಾರ 4 ಕಾರ್ಮಿಕ ಕಾಯ್ದೆಗಳಿಗೆ ನಿಯಮ ರೂಪಿಸದೆ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.
ಕೇಂದ್ರದ ಕಾರ್ಮಿಕರ ನೀತಿಗಳಿಂದ ನೇರವಾದ ಹೊಡೆತ ಸ್ಥಳೀಯ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬೀಳಲಿದೆ. ಕಾರ್ಮಿಕರ ಹಿತ ಕಾಪಾಡುವ ಬದಲಿಗೆ ಬಂಡವಾಳಶಾಹಿಗಳ ಹಿತ ಕಾಪಾಡುವುದು ಸರ್ಕಾರಗಳಿಗೆ ಮುಖ್ಯವಾಗಿದೆ. ಸಂಹಿತೆ ಮೂಲಕ ನಿಗದಿ ಅವಧಿಯ ಉದ್ಯೋಗಕ್ಕೆ ಅವಕಾಶ ನೀಡಿ ಕಾಯಂ ಉದ್ಯೋಗದಿಂದ ಕಾರ್ಮಿಕರನ್ನು ಹೊರ ಹಾಕಲಾಗಿದೆ ಎಂದು ಆರೋಪಿಸಿದರು.
ವಿದ್ಯುಚ್ಛಕ್ತಿ ಖಾಸಗೀಕರಣ, ಪ್ರಸರಣ ಮತ್ತು ಅನುಷ್ಠಾನ ನಿರ್ವಹಣೆ ಖಾಸಗಿ ಬಂಡವಾಳಗಾರರಿಗೆ ನೀಡುವ ಮೂಲಕ ರೈತರು, ಜನ ಸಾಮಾನ್ಯರ ಸಬ್ಸಿಡಿಗೆ ಕಲ್ಲು ಹಾಕಿದೆ ಎಂದು ಕಿಡಿಕಾರಿದರು. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡದೆ ಕೃಷಿಯನ್ನು ಉತ್ತೇಜಿಸದೆ ಭೂ ಸ್ವಾದೀನ ಕಾಯ್ದೆ ಮೂಲಕ ರೈತ ಜಮೀನು ಕಸಿದುಕೊಳ್ಳುವ ಹುನ್ನಾರ ನಡೆದನ್ನು ಖಂಡಿಸಿದರು.
4 ಲೇಬರ್ ಕೋಡ್ ರದ್ದುಗೊಳಿಸಬೇಕು, ನರೇಗಾ ಯೋಜನೆಯನ್ನು ಮರು ಸ್ಥಾಪಿಸಬೇಕು. ಭೂ ಸ್ವಾಧೀನ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಂದಿರುವ ಭೂ ಸುಧಾರಣಾ, ಎಪಿಎಂಸಿ, ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುಚ್ಛಕ್ತಿ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಬೀಜ ಮಸೂದೆ ಕಾಯ್ದೆಯನ್ನ ಹಿಂಪಡೆಯಬೇಕು ಎಂದು ಎಚ್.ಎಸ್.ಮಂಜುನಾಥ್ ಮನವಿ ಮಾಡಿದರು.
ತಾಲೂಕು ಕಚೇರಿ ಮುಂಭಾಗದಿಂದ ಸಾಗಿದ ಪ್ರತಿಭಟನಾ ರ‌್ಯಾಲಿ ನವೋದಯ ವೃತ್ತದ, ಹೊಸ ಬಸ್ ನಿಲ್ದಾಣ ಮುಖಾಂತರ ಮೈಸೂರು ರಸ್ತೆಯಲ್ಲಿ ಸಾಗಿ ಆಸ್ಪತ್ರೆ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ರಾಜ್ಯ, ಕೇಂದ್ರ ಸರ್ಕಾರಗಳ ನೀತಿ ಖಂಡಿಸಲಾಯಿತು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಯಲಕ್ಷ್ಮೀ, ಕಾರ್ಯದರ್ಶಿ ನಾಗರತ್ನ, ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ತೇಜಸ್ ಗೌಡ, ಕಾರ್ಯದರ್ಶಿ ವಾಸು, ಚಂದ್ರೇಗೌಡ, ಸಹ ಕಾರ್ಯದರ್ಶಿ ಲಕ್ಷ್ಮೇಗೌಡ, ದಲಿತ ಸಂಘಟನೆಗಳ ಮುಖಂಡರಾದ ಗೋವಿಂದರಾಜು, ಮಂಜಣ್ಣ ದಂಡೋರ, ಹರೀಶ, ಬೀದಿ ಬದಿ ವ್ಯಾಪಾರಿಗಳ ಸಂಘ ಜಾವೀದ್, ರೈತ ಸಂಘದ ಮುಖಂಡರಾದ ಕುಮಾರ್, ನಾಗರತ್ನಮ್ಮ, ಹರೀಶ, ರವಿಗೌಡಯ್ಯ, ಬಿಸಿಯೂಟ ನೌಕರ ಸಂಘದ ,ಉಷಾ, ರೈತರು, ಕಾರ್ಮಿಕರ, ಆಶಾ ಕಾರ್ಯಕರ್ತೆ ಇದ್ದರು.