ಹಾಸನದ ಕೃಷಿ ಇಲಾಖೆ ಕಚೇರಿಯಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿದರು. ಆಶಾ, ವನಿತಾ, ಲಕ್ಷ್ಮೀಬಾಯಿ, ಪ್ರೀತಿ, ವೀಣಾ, ಕುಮಾರಸ್ವಾಮಿ, ನೀಲಮ್ಮ, ಗೀತಾ ಇತರರಿದ್ದರು. 
ಹಾಸನ

ರೈತರು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ರೈತರು ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಲಿ
  • ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಸಲಹೆ
ಹಾಸನ: ಮುಂಗಾರು ಮಳೆಯ ಅನಿಶ್ಚಿತತೆ ಜತೆಗೆ ಆಗಸ್ಟ್‌ನಲ್ಲೂ ಮಳೆ ಕೊರತೆ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರೈತರು ಮೆಕ್ಕೆಜೋಳ ಬೆಳೆಗೆ ಸೀಮಿತವಾಗದೆ ರಾಗಿ ಸೇರಿದಂತೆ ಬಹುಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಸಲಹೆ ನೀಡಿದರು.
ನಗರದ ಸಂತೇಪೇಟೆಯ ನಗರ ಪಾಲಿಕೆ ಮುಂಭಾಗದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳು ಹಾಗೂ ರೈತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ರೈತರು ಪರಿಸ್ಥಿತಿಗೆ ತಕ್ಕಂತೆ ಬೆಳೆ ಪದ್ಧತಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದು ಹೇಳಿದರು.
ಮಳೆ ಕೊರತೆಯಿಂದ ಮೆಕ್ಕೆಜೋಳ ಬೆಳೆಯಲ್ಲಿ ಬಿಳಿಸುಳಿ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರಿಂದ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ರಾಗಿ ಸೇರಿದಂತೆ ಕಡಿಮೆ ನೀರು ಬೇಕಾಗುವ ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡುವುದು ಉತ್ತಮ ಎಂದರು.
ರಾಗಿ ಬೆಳೆಯನ್ನು ಉತ್ತೇಜಿಸಲು ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಕೃಷಿ ಇಲಾಖೆ ಅಧಿಕಾರಿ ಪೂರೈಸುವಂತಾಗಬೇಕು. ಜತೆಗೆ ಸರ್ಕಾರದ ವಿವಿಧ ಯೋಜನೆಗಳು ನೈಜ ರೈತರಿಗೆ ಯಾವುದೇ ತೊಂದರೆಯಾಗದಂತೆ ತಲುಪಬೇಕು ಎಂದು ಹೇಳಿದರು.
ಗೊಬ್ಬರ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ರೈತರು ಅಧಿಕಾರಿಗಳ ಗಮನ ಸೆಳೆದರು. ಗೊಬ್ಬರ ಪಡೆಯಲು ಹಲವು ದಿನಗಳಿಂದ ಪಟ್ಟಣಕ್ಕೆ ಅಲೆದಾಡಬೇಕಾಗುತ್ತಿದೆ. ಕೆಲವೆಡೆ ಸಮರ್ಪಕ ಪ್ರಮಾಣದಲ್ಲಿ ಗೊಬ್ಬರ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಕೆಲವು ರೈತರು, ಕುಟುಂಬದ ಹಿರಿಯರ ಹೆಸರಿನಲ್ಲೇ ಜಮೀನು ದಾಖಲೆಗಳಿರುವುದರಿಂದ ಪಹಣಿ ವರ್ಗಾವಣೆಯಾಗದೆ ಗೊಬ್ಬರ ಹಾಗೂ ಇತರ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಸ್ವರೂಪ್ ಪ್ರಕಾಶ್, ಗ್ರಾಮ ಪಂಚಾಯಿತಿಗಳ ಮೂಲಕ ಗೊಬ್ಬರ ವಿತರಣೆ ವ್ಯವಸ್ಥೆ ಮಾಡಲಾಗಿದ್ದು, ದಾಖಲೆಗಳ ಸಮಸ್ಯೆ ಇರುವ ರೈತರು ಹಾಲು ಉತ್ಪಾದಕರ ಸಹಕಾರ ಸಂಘ ಅಥವಾ ಇತರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ್ದರೆ ಬ್ಯಾಂಕ್‌ಗಳ ಮೂಲಕ ಕೃಷಿ ಸಾಲ ಪಡೆಯಬಹುದು ಎಂದು ತಿಳಿಸಿದರು.
ಒಂದೇ ಬೆಳೆಗೆ ಅವಲಂಬಿತರಾಗುವುದು ಅಪಾಯಕಾರಿ. ಬೆಳೆ ವೈವಿಧ್ಯತೆಯೇ ರೈತರ ಆದಾಯ ಹಾಗೂ ಭದ್ರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ರೈತರು ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ಕುಮಾರ್, ರಾಜ್ಯದಲ್ಲಿ ಎಥೆನಾಲ್ ಉತ್ಪಾದನಾ ಘಟಕಗಳಿರುವ ಬೆಳಗಾವಿ, ಹಾವೇರಿ, ಬಾಗಲಕೋಟೆ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಮೆಕ್ಕೆಜೋಳಕ್ಕೆ 2,400 ಎಂಎಸ್‌ಪಿ ನಿಗದಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಎಥೆನಾಲ್ ಘಟಕಗಳಿಲ್ಲದ ಕಾರಣ ಇಲ್ಲಿನ ರೈತರಿಗೆ ಆ ಸೌಲಭ್ಯ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಎನ್‌ಎಫ್‌ಎಸ್‌ಎಂ ಯೋಜನೆಯಡಿ ಅರ್ಹ ರೈತರಿಗೆ ರಾಗಿ ಬಿತ್ತನೆ ಬೀಜ ವಿತರಿಸಲಾಯಿತು. ಆಶಾ, ವನಿತಾ, ಲಕ್ಷ್ಮೀಬಾಯಿ, ಪ್ರೀತಿ, ವೀಣಾ, ಕುಮಾರಸ್ವಾಮಿ, ನೀಲಮ್ಮ ಸೇರಿದಂತೆ ಸಾಲಗಾಮೆ ಗ್ರಾಮದ ಹಲವು ರೈತರು ಪಡೆದುಕೊಂಡರು. ತಹಸೀಲ್ದಾರ್ ಗೀತಾ, ಕೃಷಿ ಇಲಾಖೆಯ ಉಪ ನಿರ್ದೇಶಕಿ ಕೋಕಿಲಾ, ಜಂಟಿ ನಿರ್ದೇಶಕ ರಮೇಶ್ ಕುಮಾರ್, ಜಯರಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರೈತರು ಚರ್ಚೆ ನಡೆಸಿದರು.