ಬಿಜೆಪಿ ರೈತಮೋರ್ಚಾದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಶಾಸಕ ಸಿಮೆಂಟ್ ಮಂಜು, ಶಾಸಕ ಎಚ್.ಕೆ.ಸುರೇಶ್, ಎಂಎಲ್‌ಸಿ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಅಮಿತ್ ಶೆಟ್ಟಿ ಇತರರಿದ್ದರು.
- ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ
- ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಲು ಆಗ್ರಹ
- ಬಿಜೆಪಿ ವತಿಯಿಂದ ಪ್ರತಿಭಟನಾ ಮೆರವಣಿಗೆ
ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರಿಗೆ ಪರಿಹಾರ ನೀಡುವಲ್ಲಿ ಅನ್ಯಾಯ ಮಾಡುತ್ತಿದೆ, ಇದರಿಂದ ರೈತರಿಗೆ ಸಮಸ್ಯೆ ಆಗಿದೆ. ಕೂಡಲೇ ರೈತರ ಸಮಸ್ಯೆ ಬಗೆಹರಿಸಬೇಕು. ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಆರಂಭಿಸಿ ಬೆಂಬಲ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ರೈತಮೋರ್ಚಾದ ವತಿಯಿಂದ ನಗರದಲ್ಲಿ ಬೃಹತ್ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಆರ್.ಸಿ.ರಸ್ತೆಯ ಜಿಲ್ಲಾ ಬಿಜೆಪಿ ಕಚೇರಿಯಿಂದ ಎತ್ತಿನ ಗಾಡಿ, ಹಾಲಿನ ಕ್ಯಾನ್ ಹಿಡಿದು ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಪಂ ಕಚೇರಿ ಎದುರು ಬಿ.ಎಂ.ರಸ್ತೆ ಸಂಚಾರ ತಡೆದು, ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಮಾತನಾಡಿ, ರಾಜ್ಯದಲ್ಲಿ ಶೇ.58 ರಷ್ಟು ಜನಸಂಖ್ಯೆ ರೈತಾಪಿ ವರ್ಗವಾಗಿದ್ದು, ಶೇ.85 ರೈತರು ಸಣ್ಣ ಹಿಡುವಳಿದಾರರಾಗಿದ್ದಾರೆ. ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ, ರೈತರ ಪರ ಇದ್ದ ಅನೇಕ ಯೋಜನೆ ಸ್ಥಗಿತಗೊಳಿಸಿದೆ. ಸರ್ಕಾರದ ಅಂಕಿ ಅಂಶ ಪ್ರಕಾರ 14.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ, 10,748 ಕೋಟಿ ರೂ. ನಷ್ಟವಾಗಿದೆ. 9 ಜಿಲ್ಲೆಗಳಲ್ಲಿ ಹಾನಿ ಗಂಭೀರವಾಗಿದೆ. ಆದರೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ . ಅಲ್ಲದೆ ಪರಿಹಾರ ನೀಡಿದ್ದರೂ, ಅದು ವೈಜ್ಞಾನಿಕವಾಗಿಲ್ಲ. ಸರ್ಕಾರ ಕೂಡಲೇ ಮರು ಸಮೀಕ್ಷೆ ನಡೆಸಿ, ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
ಅನೇಕ ಜಿಲ್ಲೆಗಳಲ್ಲಿ ಕೊಯ್ಲು ಹಂತದಲ್ಲಿ ಸುರಿದ ಭಾರಿ ಮಳೆಯಿಂದ ತೊಗರಿಬೇಳೆ, ಹೆಸರು, ಹತ್ತಿ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆ ನಷ್ಟವಾಗಿದೆ. ಪಶ್ಚಿಮಘಟ್ಟ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಪ್ರಾಣಿ-ಮಾನವ ಸಂಘರ್ಷ, ಕಾಫಿ-ಅಡಕೆ, ಮೆಣಸು, ಏಲಕ್ಕಿ ಬೆಳೆ ಹಾಳಾಗಿದೆ. ಇಷ್ಟಾದರೂ ಎರಡೂವರೆ ವರ್ಷದಿಂದ ಸರ್ಕಾರ ಬದುಕಿಲ್ಲ ಅನ್ನಿಸುತ್ತಿದೆ. ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಇಲ್ಲ. ಕೃಷಿ ಸಚಿವರು ಪರಿಶೀಲನೆಗೆ ಬಂದಿಲ್ಲ, ಪರಿಹಾರವನ್ನೂ ನೀಡಿಲ್ಲ ಎಂದು ಕಿಡಿ ಕಾರಿದರು.
ಯಾವುದೇ ಸರ್ಕಾರ ರೈತರನ್ನು ಎದುರು ಹಾಕಿಕೊಂಡು ಬದುಕಿಲ್ಲ. ಪಿಎಂ ಕಿಸಾನ್ ಸಮ್ಮಾನ್ ಹಣ ಕಡಿತಗೊಳಿಸಲಾಗಿದೆ. 620 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವಾಗಿ ನೀಡಬೇಕಿದೆ. ಇದನ್ನು ನೋಡಿದರೆ ಸರ್ಕಾರ ಯಾರ ಪರ ಇದೆ ಎಂಬ ಅನುಮಾನ ಮೂಡುತ್ತಿದೆ. ಪರಿಹಾರಕ್ಕಾಗಿ ಕಬ್ಬು ಬೆಳೆಗಾರರು ತಿಂಗಳುಗಟ್ಟಲೆ ಹೋರಾಟ ಮಾಡಿದರು. ಇದು ರೈತ ವಿರೋಧಿ ಸರ್ಕಾರ, ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ ಸಿಎಂ ಡಿ.6 ರಂದು ಹಾಸನಕ್ಕೆ ಬರುವುದರೊಳಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಎಚ್.ಕೆ.ಸುರೇಶ್, ಎಂಎಲ್‌ಸಿ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಅಮಿತ್ ಶೆಟ್ಟಿ, ಗಿರೀಶ್ ನಂಬೀಹಳ್ಳಿ, ಎಸ್.ಡಿ. ಚಂದ್ರು, ಗಿರೀಶ್, ಬಿ.ಎಚ್. ನಾರಾಯಣಗೌಡ, ಪ್ರಸನ್ನಕುಮಾರ್, ವೇದಾವತಿ, ಚನ್ನಕೇಶವ, ಶೋಭನ್ ಬಾಬು, ರಾಜ ಕುಮಾರ್ ಮೊದಲಾದವರಿದ್ದರು. ನಂತರ ಎಡಿಸಿ ಅವರಿಗೆ ಮನವಿ ಸಲ್ಲಿಸಲಾಯಿತು.