ಆಲೂರಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು. 
ಹಾಸನ

ಆರೋಗ್ಯವಂತ ಮಹಿಳೆಯಿಂದ ಕುಟುಂಬ ಕ್ಷೇಮ

ಪ್ರಮುಖ ಮುಖ್ಯಾಂಶಗಳು

  • ಯೋಗ ಗುರು ಚೇತನ್ ಗುರೂಜಿ ಅಭಿಮತ
ಆಲೂರು: ಮಹಿಳೆಯರಿಗೆ ಆರೋಗ್ಯದ ಕಾಳಜಿ ಮುಖ್ಯವಾಗಿದ್ದು, ಆರೋಗ್ಯವಂತ ಮಹಿಳೆಯಿಂದ ಇಡೀ ಕುಟುಂಬ ಕ್ಷೇಮವಾಗಿರುತ್ತದೆ ಎಂದು ಯೋಗ ಗುರು ಚೇತನ್ ಗುರೂಜಿ ಸಲಹೆ ನೀಡಿದರು.
ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ, ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಒಬ್ಬ ವ್ಯಕ್ತಿಗೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ಪ್ರತಿ ವರ್ಷ ಯೋಗ, ಉಚಿತ ತಪಾಸಣೆ ಶಿಬಿರ ಆಯೋಜಿಸುತ್ತಿದ್ದು, ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದು ತಿಳಿಸಿದರು.
ನಾವು ಆಹಾರವನ್ನು ಸೇವಿಸುವಾಗ ಜಾಗ್ರತೆ ವಹಿಸಬೇಕು. ಆಹಾರ ಪದ್ಧತಿ ಕೂಡ ಬಹಳ ಮುಖ್ಯವಾಗಿದ್ದು, ಯೋಗ ಮಾಡಿ ದೇಹವನ್ನು ಹಿಡಿತದಲ್ಲಿಟ್ಟುಕೊಂಡಲ್ಲಿ ಅನಾರೋಗ್ಯದಿಂದ ದೂರವಿರಬಹುದು ಎಂದು ಹೇಳಿದರು.
ಲಯನ್ ಸಂಸ್ಥೆ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಹಲವು ವರ್ಷಗಳಿಂದ ಆಲೂರು ಲಯನ್ ಸೇವಾ ಸಂಸ್ಥೆಯಿಂದ ಉಚಿತ ಆರೋಗ್ಯ ಶಿಬಿರ ಸೇರಿದಂತೆ ಸಮಾಜಮುಖಿ ಕೆಲಸಗಳನ್ನು ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಯಾವುದೂ ಇಲ್ಲ. ಆದ್ದರಿಂದ ಆಲೂರಿನ ನಾಗರಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ತಪಾಸಣೆ ನಡೆಯಿತು. ನಂತರ ಶಸ್ತ್ರಚಿಕಿತ್ಸೆ, ಕಣ್ಣಿನ ಪರೀಕ್ಷೆ ನಡೆದು ಉಚಿತವಾಗಿ ಕನ್ನಡಕ ನೀಡಲಾಯಿತು. ಹಾಸನದ ವಿ ಕೇರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಿಂದ ಉಚಿತ ದಂತ ಪರೀಕ್ಷೆ ನಡೆಯಿತು. ಸುಮಾರು 55 ಜನರು ರಕ್ತದಾನ ಮಾಡಿದರು. ಸುಮಾರು 200 ಕ್ಕೂ ಹೆಚ್ಚಿನ ಜನರು ಕಣ್ಣಿನ ತಪಾಸಣೆಯ ಪ್ರಯೋಜನ ಪಡೆದರು. 60ಕ್ಕೂ ಹೆಚ್ಚು ಕನ್ನಡಕಗಳನ್ನು ಉಚಿತ ವಾಗಿ ನೀಡಲಾಯಿತು. ಇದಲ್ಲದೆ 12 ಜನರಿಗೆ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಯಿತು. ಸುಮಾರು 50ಕ್ಕೂ ಹೆಚ್ಚು ಜನರು ದಂತ ಚಿಕಿತ್ಸೆ ಮಾಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಆಲೂರು ಲಯನ್ಸ್ ಸೇವಾ ಸಂಸ್ಥೆ ಕಾರ್ಯದರ್ಶಿ ಶಾಂತಕುಮಾರ್, ಖಜಾಂಚಿ ಕಟ್ಟೆಗದ್ದೆ ನಾಗರಾಜ್, ಗೌರವಾಧ್ಯಕ್ಷ ರೇಣುಕಾ ಪ್ರಸಾದ್, ಮಾಜಿ ಅಧ್ಯಕ್ಷರಾದ ನಟರಾಜ್ ಕರವೇ, ರಘು ಪಾಳ್ಯ, ಪ್ರವೀಣ್, ಡಿ.ಜೆ.ನವೀನ್, ಸಂಸ್ಥೆ ಸದಸ್ಯರಾದ ಚಂದ್ರಶೇಖರ, ಚಂದ್ರು, ಮಂಜುನಾಥ್, ಗಿರೀಶ್, ಪರಮೇಶ್, ದೀಪು, ಟಿ.ಆರ್ ಆನಂದ್, ನೂತನ್, ರಾಮಚಂದ್ರ, ಪ್ರಭು ಬೈರಾಪುರ, ಚಿರಾಗ್, ಭವ್ಯಾರಘು, ಸೌಮ್ಯ ಗಿರೀಶ್, ಆಶಾ ಮಲ್ಲಿಕಾರ್ಜುನ ಇತರರಿದ್ದರು.