ಹಿರೀಸಾವೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ, ಮಳೆಗೆ ತೆಂಗಿನ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿರುವುದು.
ಹಿರೀಸಾವೆ: ಹೋಬಳಿಯ ಗಡಿ ಭಾಗದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಗಾಳಿ, ಮಳೆಗೆ ತೆಂಗಿನ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ.
ಶುಕ್ರವಾರ ರಾತ್ರಿ 10 ಗಂಟೆ ಶುರುವಾದ ಮಳೆಯೊಂದಿಗೆ ಭಾರಿ ಗಾಳಿ ಬೀಸಿದ ಪರಿಣಾಮ ಹೋಬಳಿ ವ್ಯಾಪ್ತಿ ಗ್ರಾಮಗಳಲ್ಲಿ ಸುಮಾರು 60 ಕ್ಕೂ ಹೆಚ್ಚು ತೆಂಗಿನ ಮರಗಳು ಬುಡ ಸಮೇತ ಧರೆಗುರುಳಿವೆ. ಕೆಲವೆಡೆ ತೆಂಗಿನ ಮರಗಳು ಅರ್ಧಕ್ಕೆ ಮುರಿದು ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಪರಿಣಾಮ 12ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ.
ಉಳ್ಳಾವಳ್ಳಿ ಗ್ರಾಮದ ಸಮೀಪ ಮುದಿಬೆಟ್ಟ ಕಾವಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ತೆಂಗಿನ ಮರವೊಂದು ಉರುಳಿ ಬಿದ್ದಿದ್ದು ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಯ ಮೇಲೆ ಬಿದ್ದಿವೆ. ಇದರಿಂದ ಜನ-ಜಾನುವಾರುಗಳು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.
ಉಳ್ಳಾವಳ್ಳಿ ಗ್ರಾಮದ ಜಗದೀಶ್ ಎಂಬುವರ ಮನೆಯ ಚಾವಣಿ ಬಿರುಗಾಳಿಯ ಅಬ್ಬರಕ್ಕೆ ಹಾರಿ ಪಕ್ಕದ ಜಮೀನಿಗೆ ಬಿದ್ದಿದೆ. ರಾಮಣ್ಣ ಎಂಬುವರ ಶೆಡ್‌ನ ಚಾವಣಿ ಹಾರಿ ಹೋಗಿದ್ದು ಕಾಂಕ್ರೀಟ್ ಕಂಬಗಳು ಮುರಿದು ಬಿದ್ದಿವೆ. ಅಳವಡಿಸಿದ್ದ ಕಾಂಕ್ರೀಟ್ ಶೀಟುಗಳು ಸಂಪೂರ್ಣ ಜಖಂಗೊಂಡಿವೆ. ಮೆಳ್ಳಹಳ್ಳಿ ಗ್ರಾಮದ ಬಳಿಯಿಂದ ಉಳ್ಳಾವಳ್ಳಿ, ಮುದಿಬೆಟ್ಟ ಕಾವಲು ಹಾಗೂ ನಾಗನಹಳ್ಳಿ ಸಮೀಪದವರೆಗೂ ಒಂದೇ ಮಾರ್ಗದಲ್ಲಿ 60ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಕ್ಕುರುಳಿವೆ. ಇದರಿಂದ ಉಳ್ಳಾವಳ್ಳಿ ಮುದಿಬೆಟ್ಟ ಕಾವಲು ಹಾಗೂ ತೋಟದ ಸಾಲಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಶನಿವಾರ ಬೆಳಗ್ಗೆಯಿಂದಲೇ ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಂಬಗಳ ತೆರವು ಕಾರ್ಯ ಕೈಗೊಂಡಿದ್ದರು.
ಶನಿವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ 3 ಗಂಟೆಯಿಂದ ತಾಲೂಕಿನ ಕೆಲವೆಡೆ ಮಳೆಯಾಯಿತು. ಸದ್ಯ ಮಳೆ ಸುರಿದಿರುವುದು ರೈತರಲ್ಲಿ ಸ್ವಲ್ಪ ನೆಮ್ಮದಿ ತಂದಿದೆ.