ಆಲೂರು ತಾಲೂಕು ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಸೋಮವಾರ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು. 
ಹಾಸನ

ಆಲೂರು ತಾಲೂಕು ಕಚೇರಿಗೆ ಹುಸಿ ಬಾಂಬ್ ಕರೆ

ಕೆಲಸ ಸ್ಥಗಿತಗೊಳಿಸಿ ಹೊರ ಓಡಿದ ಸಿಬ್ಬಂದಿ  ಕೆಲಕಾಲ ಆತಂಕದ ವಾತಾವರಣ

ಆಲೂರು: ಇಲ್ಲಿನ ತಾಲೂಕು ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಸೋಮವಾರ ಅನಾಮಧೇಯ ವ್ಯಕ್ತಿ ಇ-ಮೇಲ್ ಸಂದೇಶ ಕಳುಹಿಸಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು.
ತಾಲೂಕು ಕಚೇರಿಯ ಅಧಿಕೃತ ಇ-ಮೇಲ್‌ಗೆ ಬೆಳಗಿನ ಜಾವ ಗೈನ ರಮೇಶ್ ಎಂಬ ಹೆಸರಿನಲ್ಲಿ ಸಂದೇಶ ಬಂದಿದ್ದು, ಎರಡು ಆರ್‌ಡಿಎಕ್ಸ್ ಬಾಂಬ್ ಇರಿಸಿದ್ದು, ಅವು ಮಧ್ಯಾಹ್ನ 1 ಗಂಟೆಗೆ ಬ್ಲಾಸ್ಟ್ ಆಗಲಿದೆ ಎಂದು ತಿಳಿಸಿದ್ದ. ಭಾನುವಾರ ರಜೆ ಆಗಿದ್ದರಿಂದ ಎಲ್ಲ ಸಿಬ್ಬಂದಿಗೂ ಕೂಡ ರಜೆ ಇತ್ತು. ಸೋಮವಾರ ಎಂದಿನಂತೆ ಸಿಬ್ಬಂದಿ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿ ಕಂಪ್ಯೂಟರ್ ಆನ್ ಮಾಡಿ ನೋಡಿದಾಗ ಸಂದೇಶ ಬಂದಿರುವುದು ತಿಳಿಯಿತು. ಮೇಲ್ ಬಂದಿರುವುದನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರ ಎಲ್ಲ ಸಿಬ್ಬಂದಿ ಕಚೇರಿಯಿಂದ ಹೊರ ಬಂದಿದ್ದಾರೆ.
ಕೂಡಲೇ ತಹಸೀಲ್ದಾರ್ ಮಲ್ಲಿಕಾರ್ಜುನ ಅವರು ಆಲೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿ, ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಬಾಂಬ್ ನಿಷ್ಟ್ರಿಯ ದಳ, ಶ್ವಾನದಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಕಟ್ಟಡವನ್ನು ಸುದೀರ್ಘ ತಪಾಸಣೆ ನಡೆಸಿದರು.ಆದರೆ ಪರಿಶೀಲನೆ ವೇಳೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.
ಸಾರ್ವಜನಿಕರಲ್ಲಿ ಆತಂಕ: ತಾಲೂಕು ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಬೆದರಿಕೆ ಹಾಕಿದ್ದ ವಿಷಯ ಪಟ್ಟಣ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿ ಮಾಡಿತ್ತು. ಬಾಂಬ್ ಇರಿಸಲಾಗಿದೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ವೇಗವಾಗಿ ಹರಡಿದ ಹಿನ್ನೆಲೆಯಲ್ಲಿ, ತಾಲೂಕು ಕಚೇರಿ ಸುತ್ತಮುತ್ತ ಹಾಗೂ ರಸ್ತೆ ಬದಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ನಿಂತು ವೀಕ್ಷಿಸತೊಡಗಿದರು. ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ನಡೆಸಿ ಹೋಗುವವರೆಗೂ ಪಟ್ಟಣದಲ್ಲಿ ಆತಂಕದ ವಾತಾವರಣ ಮುಂದುವರಿದಿತ್ತು.
ಸಕಲೇಶಪುರ ಡಿವೈಎಸ್ಪಿ ಮಾಲತೇಶ್, ಆಲೂರು ಇನ್‌ಸ್ಪೆಕ್ಟರ್ ಮೋಹನ್ ರೆಡ್ಡಿ, ಎಎಸ್‌ಐ ಅನಂತ್, ಮೋಹನ್, ಸಿಬ್ಬಂದಿ ಸಂಗಮ್, ಪೂರ್ಣಚಂದ್ರ, ಪುನೀತ್ ಸೇರಿದಂತೆ ಇನ್ನಿತರರು ಹಾಜರಿದ್ದರು.