ಹಿರೀಸಾವೆ ಹೋಬಳಿಯ ಪುರಾಣ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥ ಸ್ವಾಮಿ 
ಹಾಸನ

ಬೂಕನಬೆಟ್ಟದಲ್ಲಿ ಜಾತ್ರಾ ಮಹೋತ್ಸವ

ನಾಗೇಶ ಎಸ್
ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಬೂಕನಬೆಟ್ಟದ ಶ್ರೀ ರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವವು ಜ.8ರಿಂದ ಜ.21ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಶಾಸಕ ಸಿ.ಎನ್.ಬಾಲಕೃಷ್ಣ ಅವರ ನೇತೃತ್ವದಲ್ಲಿ ತಾಲೂಕು ಆಡಳಿತದ ವತಿಯಿಂದ ಕುಡಿಯುವ ನೀರು, ವಿದ್ಯುತ್ ಪೂರೈಕೆ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರದರ್ಶನ ಹಾಗೂ ಮಾರಾಟದ ಸಲುವಾಗಿ ಹಳ್ಳಿಕಾರ್, ಮಲೆನಾಡು ಗಿಡ್ಡ ಸೇರಿದಂತೆ ವಿವಿಧ ತಳಿಯ ಜಾನುವಾರುಗಳು ಆಗಮಿಸುತ್ತಿವೆ.
ಪ್ರತಿನಿತ್ಯ ಮುಂಜಾನೆಯಿಂದಲೇ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಳ್ಳಲಿದ್ದು, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜ.9ರಿಂದ 11ರವರೆಗೆ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯಲಿದೆ. ಜ.10 ಹಾಗೂ 11ರಂದು ಕೃಷಿ ಮೇಳ ಏರ್ಪಡಿಸಲಾಗಿದೆ. ಜ.15ರಂದು ಹಗಲು ಅಭಿಷೇಕ ಹಾಗೂ ದೊಡ್ಡ ಗರುಡೋತ್ಸವ ನಡೆಯಲಿದೆ. 17ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿವೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮ್ಯಾರಥಾನ್ ಓಟ, ಮ್ಯೂಸಿಕಲ್ ಚೇರ್ ಹಾಗೂ ಪುರುಷರಿಗೆ ಮ್ಯಾರಥಾನ್ ಓಟ, ಹಗ್ಗ ಜಗ್ಗಾಟ ಹಾಗೂ ಸ್ಲೋ ಸೈಕಲ್ ರೇಸ್ ಸ್ಪರ್ಧೆ ಏರ್ಪಡಿಸಲಾಗಿದೆ.
ಜಾತ್ರೆಯ ಪ್ರಮುಖ ಆಕರ್ಷಣೀಯ ಶ್ರೀರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ಜ.19ರಂದು ಮಧ್ಯಾಹ್ನ 12.5 ನಡೆಯಲಿದೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ಶ್ರೀ ರಂಗನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.