ಹೊಳೆನರಸೀಪುರ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ 2026-27ನೇ ಸಾಲಿನ ಆಯವ್ಯಯ ಮಂಡನೆಯನ್ನು ಆಡಳಿತಾಧಿಕಾರಿ ಜಗದೀಶ್ ಗಂಗಣ್ಣವರ್ ಮಂಡಿಸಿದರು. ಶಾಸಕ ಎಚ್.ಡಿ.ರೇವಣ್ಣ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್ ಇದ್ದರು.
ಹೊಳೆನರಸೀಪುರ: 2026-27ನೇ ಸಾಲಿನ ಪುರಸಭೆ ಅಂದಾಜು ಆಯ-ವ್ಯಯದ 29,74,484 ರೂ.ಗಳ ಉಳಿತಾಯ ಬಜೆಟನ್ನು ಪುರಸಭೆ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣವರ್ ಮಂಡಿಸಿದರು.
ಪಟ್ಟಣದ ಪುರಸಭೆಯ ಎಚ್.ಡಿ.ದೇವೇಗೌಡ ಸಭಾಂಗಣದಲ್ಲಿ ಗುರುವಾರ ಶಾಸಕ ಎಚ್.ಡಿ.ರೇವಣ್ಣ ಅವರ ಉಪಸ್ಥಿತಿಯಲ್ಲಿ ಆಯವ್ಯಯ ಮಂಡನೆ ಮಾಡಿದರು. ಆರಂಭಿಕ ಶುಲ್ಕ 27,89,484 ರೂ.ಗಳನ್ನು ಒಳಗೊಂಡಂತೆ ಒಟ್ಟು 3,05,77,84,484 ರೂ.ಗಳ ಆದಾಯ ನಿರೀಕ್ಷಿಸಲಾಗಿದೆ. 3,05,48,10,000 ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ ಎಂದು 29,74,484 ರೂ.ಗಳ ನಿರೀಕ್ಷಿತ ಉಳಿತಾಯವನ್ನು ಹೊಂದಿರುತ್ತದೆ ಎಂದು ಹೇಳಿದರು.
ಪುರಸಭಾ ವ್ಯಾಪ್ತಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದರ್ಶನಕ್ಕೆ ಪ್ರತಿದಿನ ದೇವಸ್ಥಾನಕ್ಕೆ ಸಾವಿರಾರು ಜನರು ಬಂದು ಹೋಗುತ್ತಿದ್ದು, ಹೊಳೆನರಸೀಪುರದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ/ರಾಜ್ಯ ಸರ್ಕಾರದಿಂದ ಅನುದಾನ ನಿರೀಕ್ಷೆ ಮಾಡಲಾಗಿದೆ. ಪ್ರವಾಸಿಗರು, ಭಕ್ತಾದಿಗಳು ಹಾಗೂ ನಾಗರಿಕರಿಗೆ ಅನುಕೂಲವಾಗುವಂತೆ ಮೂಲಸೌಕರ್ಯಗಳಾದ ಕುಡಿಯುವ ನೀರು, ಬೀದಿದೀಪಗಳು, ನೈರ್ಮಲ್ಯ, ಉತ್ತಮವಾದ ರಸ್ತೆ ಮತ್ತು ಚರಂಡಿಗಳ ವ್ಯವಸ್ಥೆಗಳನ್ನು ಒದಗಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಿಲಾಗಿದೆ ಎಂದು ಹೇಳಿದರು.
ಹೊಳೆನರಸೀಪುರ ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳಿಗೆ ಸಿದ್ಧಪಡಿಸಲಾಗಿರುವ 2026-27ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿಯನ್ನು ಪಟ್ಟಣದ ಸರ್ವೋತೋಮುಖ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನ ಮಂತ್ರಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ, ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಂಸದ ಶ್ರೇಯಸ್ ಎಂ. ಪಟೇಲ್ ಅವರ ಪರಿಶ್ರಮದಿಂದ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಎಲ್ಲರ ಸಹಕಾರದಿಂದ ರಾಜ್ಯ ಹಣಕಾಸು ವಿಶೇಷ ಅನುದಾನದಡಿ ಸುಸಜ್ಜಿತ ವಾಣಿಜ್ಯ ಮಳಿಗೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ವಹಿಸಲಾಗುತ್ತಿರುತ್ತದೆ ಎಂದರು.
2019-20ನೇ ಸಾಲಿನ ಬಾಕಿ ಮೊತ್ತ 4 ಕೋಟಿ ರೂ.ಗೆ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿನ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ನಿರ್ವಹಿಸಲು ಕ್ರಮವಹಿಸಲಾಗಿದೆ. ಅಮೃತ್ ನಗರೋತ್ಥಾನ ಯೋಜನೆ, ರಾಜ್ಯ ಸರ್ಕಾರದ ಎಸ್.ಎಫ್.ಸಿ ಮುಕ್ತನಿಧಿ ಅನುದಾನ, 16ನೇ ಹಣಕಾಸು ಯೋಜನೆ, ಅಮೃತ್ ನಿರ್ಮಲ ನಗರ ಯೋಜನೆ ಮತ್ತು ಪುರಸಭಾ ನಿಧಿಯಿಂದ ಅನೇಕ ಅಭಿವೃದ್ಧಿ ಕಾಮಗಾರಿಗಳು, ಮಳೆನೀರು ಚರಂಡಿ ಕಾಮಗಾರಿ, ಡಾಂಬರೀಕರಣ ಕಾಮಗಾರಿಗಳು ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳು, ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ 1000 ಫಲಾನುಭವಿಗಳಿಗೆ ವಸತಿ ನಿರ್ಮಾಣ ಮಾಡಲು ಕ್ರಮವಹಿಸಲಾಗುತ್ತಿರುತ್ತದೆ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಪ್ರಮುಖ ವೃತ್ತಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದ್ದು, ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿರುತ್ತದೆ ಎಂದು ಹೇಳಿದರು.
ಶೇ. 24.10 ರ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಪಕ್ಕಾಮನೆ ನಿರ್ಮಾಣಕ್ಕಾಗಿ ಸಹಾಯಧನ, ಪ.ಜಾತಿ/ಪ.ಪಂಗಡದವರು ವಾಸಿಸುವ ಬಡಾವಣೆಗಳಲ್ಲಿ ತೆರೆಯಲಾಗಿರುವ ಗ್ರಂಥಾಲಯಗಳ ನಿರ್ವಹಣೆ, ಶೇ. 7.25 ರ ಯೋಜನೆಯಡಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ, ಪಕ್ಕಾಮನೆ ನಿರ್ಮಾಣಕ್ಕಾಗಿ ಸಹಾಯಧನ ಕಾರ್ಯಕ್ರಮಗಳನ್ನು ಹಾಗೂ ಶೇ. 5ರ ಯೋಜನೆಯಡಿ ಅಂಗವಿಕಲರಿಗೆ 3 ಚಕ್ರದ ಮೋಟಾರ್ ಚಾಲಿತ ವಾಹನ ಹಾಗೂ ಸಣ್ಣ ಉದ್ದಿಮೆಗಾಗಿ ಸಹಾಯಧನ ನೀಡುವ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ ಎಂದು ತಿಳಿಸಿದರು.
ಪಟ್ಟಣದ ಸಾರ್ವಜನಿಕರಿಗೆ ತಮ್ಮ ಆಸ್ತಿಗೆ ಸಂಬಂಧಪಟ್ಟಂತೆ ಇ-ಆಸ್ತಿ, ಕಟ್ಟಡ ಪರವಾನಗಿಯನ್ನು ಯುಲ್‌ಎಂಎಸ್ ತಂತ್ರಾಂಶದಲ್ಲಿ, ಜನನ-ಮರಣ ನೋಂದಣಿಯನ್ನು ಇ-ಜನ್ಮ ತಂತ್ರಾಂಶದಲ್ಲಿ, ಉದ್ದಿಮೆ ಪರವಾನಗಿಯನ್ನು ವ್ಯಾಪಾರ್ ತಂತ್ರಾಂಶದಲ್ಲಿ ಇತ್ಯಾದಿ ಮಾಹಿತಿಗಳನ್ನು ಸಕಾಲ ಸೇವೆಯಲ್ಲಿ ನಿಗದಿತ ಅವಧಿಯಲ್ಲಿ ಗಣಕೀಕೃತ ದಾಖಲೆಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ಇ-ಆಸ್ತಿ ತಂತ್ರಾಂಶದ ಮುಖಾಂತರ ವೀಕ್ಷಿಸುವಂತೆ ಅವಕಾಶ ಕಲ್ಪಿಸಲಾಗಿದೆ ಹಾಗೂ ಸಾರ್ವಜನಿಕರು ಬೀದಿ ದೀಪ, ರಸ್ತೆ, ಯು.ಜಿ.ಡಿ, ಮಳೆ ನೀರು ಚರಂಡಿ, ಸ್ವಚ್ಛತೆಗೆ ಸಂಬಂಧಿಸಿದಂತೆ ದೂರುಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪಟ್ಟಣ ವ್ಯಾಪ್ತಿಯಲ್ಲಿ ಶೌಚಗೃಹ ರಹಿತ ಕುಟುಂಬಗಳಿಗೆ ಶೌಚಗೃಹ ಸೌಲಭ್ಯವನ್ನು ಒದಗಿಸಿ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಈಗಾಗಲೇ ಪಟ್ಟಣದಲ್ಲಿ 23 ವಾರ್ಡ್‌ಗಳನ್ನು ಬಯಲು ಶೌಚಗೃಹಮುಕ್ತ ಪ್ರದೇಶವನ್ನಾಗಿ ಘೋಷಿಸಿರುವ ಬಗ್ಗೆ ಔಆ++ ಪ್ರಮಾಣ ಪತ್ರವನ್ನು ನವದೆಹಲಿಯಲ್ಲಿ ನಡೆದ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರಿಂದ 2023-24ನೇ ಸಾಲಿನಲ್ಲಿಯೇ ಪಡೆಯಲಾಗಿರುತ್ತದೆ ಎಂದು ಹೇಳಿದರು.
ಬೇಕಿದೆ ಅನುದಾನ: 2026-27ನೇ ಸಾಲಿಗೆ ವಾರ್ಡ್‌ವಾರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ.10 ಕೋಟಿ ರೂ., ಸಮಗ್ರ ಒಳಚರಂಡಿ ಯೋಜನೆಗಾಗಿ 126.00 ಕೋಟಿ ರೂ., ಆಟದ ಮೈದಾನ, ಬಯಲು ರಂಗಮಂದಿರ ಉನ್ನತೀಕರಣಕ್ಕಾಗಿ 10.00 ಲಕ್ಷ ರೂ., ಆಶ್ರಯ ಯೋಜನೆಯಡಿ ಮೂಲ ಸೌಕರ್ಯ ಕಲ್ಪಿಸಲು 1.15 ಕೋಟಿ ರೂ., 16ನೇ ಹಣಕಾಸು ಯೋಜನೆಯಿಂದ 1.48 ಕೋಟಿ ರೂ., ಎಸ್.ಎಫ್.ಸಿ. ಮುಕ್ತನಿಧಿಯಿಂದ 6.00 ಲಕ್ಷ ರೂ., ಪುರಸಭಾ ವಾಣಿಜ್ಯ ಸಂಕೀರ್ಣಗಳ ಉನ್ನತೀಕರಣಕ್ಕಾಗಿ 2 ಕೋಟಿ ರೂ., ಸುಸಜ್ಜಿತ ತರಕಾರಿ ಮಾರುಕಟ್ಟೆಯ ಮುಂದುವರಿದ ಕಾಮಗಾರಿಗಳಿಗಾಗಿ 3.64 ಕೋಟಿ ರೂ. ಹಾಗೂ ಎಸ್.ಬಿ.ಎಂ. 2.0 ಯೋಜನೆಯಡಿ ಲೆಗೆಸಿವೇಸ್ಟ್ ಪ್ರೊಸೆಸಿಂಗ್‌ಗಾಗಿ 96.25 ಲಕ್ಷ ರೂ.ಗಳು, ಒಣತ್ಯಾಜ್ಯ ಸಂಸ್ಕರಣೆಗಾಗಿ (ಎಂ.ಆರ್.ಎಫ್) ಅನುದಾನ 42.50 ಲಕ್ಷ ರೂ., ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ 24 ಲಕ್ಷ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ ಎಂದರು.
ಈ ಎಲ್ಲ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು 2026-27ನೇ ಸಾಲಿಗೆ ವಿವಿಧ ಅಭಿವೃದ್ಧಿ ಬಾಬ್ತುಗಳಿಂದ ನಿರೀಕ್ಷಿಸಲಾಗಿರುವ ಆದಾಯಗಳು ಹಾಗೂ ಯೋಜನೆಗಳನ್ನು ಕೈಗೊಳ್ಳಲು ವೆಚ್ಚಗಳ ವಿವರಗಳನ್ನು ನೀಡಿದ್ದು, ಅನುದಾನಕ್ಕೆ ತಕ್ಕಂತೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.
2026-27ನೇ ಸಾಲಿನ ಆಯ-ವ್ಯಯ ಅಂದಾಜು ಪಟ್ಟಿಯನ್ನು ಸಭೆಗೆ ಮಂಡಿಸುತ್ತಾ, ಸಲಹೆ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗಾಗಿ ಆಯ-ವ್ಯಯ ಅನುಮೋದಿಸಲು ಕೋರಿದರು. ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್ ಯುಐ, ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.