ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಒಂದು ಲೈನ್, ಪ್ಲಾಟ್ ಫಾರ್ಮ್ ವಿಸ್ತರಿಸಲು ಹಾಗೂ ಗಜರಾಜ್ ಸಿಸ್ಟಮ್ ಅಳವಡಿಸುವಂತೆ ಪ್ರಸ್ತಾವನೆ ಸಂಸದ ಶ್ರೇಯಸ್ ಪಟೇಲ್ ಇತ್ತೀಚೆಗೆ ಮನವಿ ಸಲ್ಲಿಸಿದರು.
- ಹೊಳೆನರಸೀಪುರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ವಿಸ್ತರಿಸಿ
- ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಶ್ರೇಯಸ್ ಪಟೇಲ್ ಮನವಿ
ಹಾಸನ: ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸದ ಶ್ರೇಯಸ್ ಪಟೇಲ್ ಇತ್ತೀಚೆಗೆ ಭೇಟಿಯಾಗಿ ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಒಂದು ಲೈನ್, ಪ್ಲಾಟ್ ಫಾರ್ಮ್ ವಿಸ್ತರಿಸಲು ಹಾಗೂ ಗಜರಾಜ್ ಸಿಸ್ಟಮ್ ಅಳವಡಿಸುವಂತೆ ಮನವಿ ಸಲ್ಲಿಸಿದರು.
ಹೊಳೆನರಸೀಪುರದಲ್ಲಿ ಪ್ರಸ್ತುತ ಎರಡು ರೈಲು ಹಳಿಗಳು ಮಾತ್ರ ಇದ್ದು, ಸಂಚಾರ ದಟ್ಟಣೆ ಹಾಗೂ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ.
ಪ್ಲಾಟ್‌ಫಾರ್ಮ್ ವಿಸ್ತರಣೆ ಮತ್ತು ಸಂಬಂಧಿತ ಕಾಮಗಾರಿಗಳಿಗೆ ಅಗತ್ಯ ಭೂಮಿಯನ್ನು ರಾಜ್ಯ ಸರ್ಕಾರ ಪಿಡಬ್ಲ್ಯುಡಿ ಮೂಲಕ ರೈಲ್ವೆಗೆ ಹಸ್ತಾಂತರಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಕನಿಷ್ಠ ಒಂದು ಹೆಚ್ಚುವರಿ ರೈಲು ಹಳಿ ನಿರ್ಮಾಣ ಹಾಗೂ ಪ್ಲಾಟ್‌ಫಾರ್ಮ್ ವಿಸ್ತರಣೆಗೆ ಅನುಮೋದನೆ ನೀಡುವಂತೆ ಮನವಿ ಮಾಡಿದರು.
ಜತೆಗೆ ಮಲೆನಾಡು ಭಾಗದಲ್ಲಿ ರೈಲು ಡಿಕ್ಕಿಯಿಂದ ಆನೆಗಳ ಸಾವು ಸಂಭವಿಸುತ್ತಿರುವ ಗಂಭೀರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅಪಾಯಕಾರಿ ರೈಲು ಮಾರ್ಗಗಳಲ್ಲಿ ಗಜರಾಜ್ ಸಿಸ್ಟಮ್ (ತಂತ್ರಜ್ಞಾನ ಆಧಾರಿತ ಆನೆ ಪತ್ತೆ ಮತ್ತು ಎಚ್ಚರಿಕೆ ವ್ಯವಸ್ಥೆ) ಅಳವಡಿಸುವಂತೆ ಮನವಿ ಮಾಡಲಾಯಿತು.
ಹಾಸನ ಜಿಲ್ಲೆ ಪಶ್ಚಿಮ ಘಟ್ಟಗಳ ಪ್ರದೇಶವಾಗಿದ್ದು, ಇಲ್ಲಿ ಆನೆಗಳ ಸಹಜ ಸಂಚಾರ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ವನ್ಯಜೀವಿಗಳ ರಕ್ಷಣೆ ಮಾಡುವುದು ಅತ್ಯಗತ್ಯವಾಗಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಆನೆಗಳ ರಕ್ಷಣೆ ಹಾಗೂ ಸುರಕ್ಷಿತ ರೈಲು ಸಂಚಾರಕ್ಕೆ ಸಹಕಾರಿ ಆಗಲಿದೆ ಎಂದು ಮನವಿಯಲ್ಲಿ ಗಮನಸೆಳೆದರು.