- ಅಧಿಕಾರಿಗಳೊಂದಿಗೆ ಎರೆಬೊರೆ ಕಾವಲ್ ಗ್ರಾಮಸ್ಥರ ವಾಗ್ವಾದ
- ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವುದಕ್ಕೆ ವಿರೋಧ
- ಸ್ಮಶಾನಕ್ಕೆ ಮೀಸಲಿಟ್ಟಿದ್ದ ನಾಲ್ಕು ಎಕರೆ ಜಾಗ
ಹಾಸನ: ತಾಲೂಕಿನ ಎರೆಬೊರೆ ಕಾವಲ್ ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟಿದ್ದ ನಾಲ್ಕು ಎಕರೆ ಜಾಗದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಗ್ರಾಮಸ್ಥರು ಸ್ಮಶಾನ ಜಾಗದ ಬಳಿ ಇತ್ತೀಚೆಗೆ ಪರಿಶೀಲನೆಗೆ ತೆರಳಿದ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು.
1994ರಲ್ಲಿ 4.20 ಎಕರೆ ಜಾಗವನ್ನು ರುದ್ರಭೂಮಿಗಾಗಿ ಮೀಸಲಿಟ್ಟ ಜಾಗವನ್ನು ಕ್ರಮೇಣವಾಗಿ ಅಧಿಕಾರಿಗಳು ಉಳ್ಳವರ ಪರವಾಗಿ ಕೆಲಸ ಮಾಡಿ ಸ್ಮಶಾನ ಭೂಮಿಯನ್ನು ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಕೂಡಲೇ ಮಂಜೂರಾತಿಯನ್ನು ರದ್ದು ಮಾಡಿ ಜಾಗವನ್ನು ಸ್ಮಶಾನಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಶ್ರೀನಿವಾಸ್ ಮಾತನಾಡಿ, ಸುಮಾರು 45 ಮನೆಗಳನ್ನು ಹೊಂದಿರುವ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೆ ಕಷ್ಟವಾಗಿದೆ. ಈ ಹಿಂದೆ ಮೀಸಲಿಟ್ಟಿದ್ದ ಜಾಗವನ್ನೇ ನಮಗೆ ಸ್ಮಶಾನಕ್ಕಾಗಿ ಮೀಸಲಿಡಬೇಕು. ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಮೃತಪಟ್ಟವರನ್ನು ಇಲ್ಲಿಂದ ಸುಮಾರು 10 ಕಿ.ಮೀ. ದೂರವಿರುವ ಬಟ್ಟಗೌಡನಹಳ್ಳಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಆದರೆ, ಇದಕ್ಕಾಗಿ ಸುಮಾರು 20 ರಿಂದ 50 ಸಾವಿರ ರೂ. ವೆಚ್ಚ ತಗಲುತ್ತಿದ್ದು ಇದು ಬಡವರಿಗೆ ಹೊರೆಯಾಗಿದೆ ಎಂದು ಅಳಲು ತೋಡಿಕೊಂಡರು.
ಇದೇ ವಿಚಾರವಾಗಿ ಗ್ರಾಮ ಪಂಚಾಯಿತಿ, ತಹಸೀಲ್ದಾರ್, ಜಿಲ್ಲಾಧಿಕಾರಿ ಹೀಗೆ ಎಲ್ಲ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಪ್ರಭಾವಿಗಳ ಜತೆ ಶಾಮೀಲಾಗಿ ಈ ಜಾಗವನ್ನು ಗ್ರಾಮಸ್ಥರ ಗಮನಕ್ಕೆ ಬಾರದೆ ಕಲ್ಲು ಗಣಿಗಾರಿಕೆ ಮಾಡಲು ಅನುಮತಿ ನೀಡಿದ್ದಾರೆ. ಗ್ರಾಮದಲ್ಲಿ ಇದನ್ನು ಬಿಟ್ಟರೆ ಪರ್ಯಾಯ ಜಾಗವೂ ಇಲ್ಲ. ಆದ್ದರಿಂದ ಈ ಜಾಗ ಸ್ಮಶಾನಕ್ಕೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರಾದ ಚಂದ್ರೇಗೌಡ, ಅಭಿಷೇಕ್, ನಂದನ್‌ಕುಮಾರ್, ಅಣ್ಣಾದೊರೆ, ದೊರೆಸ್ವಾಮಿ, ಮಂಜುಳಮ್ಮ, ಗೌರಮ್ಮ, ಈಶ್ವರಿ, ಕವಿತಾ, ತಂಗ್ಯಮ್ಮ, ಸುಮಿತ್ರಾ, ಅನಿತಾ, ದ್ಯಾವಮ್ಮ, ಜ್ಯೋತಿ, ಮೀನಾಕ್ಷಿ, ಹರೀಶ, ಸಾಕಮ್ಮ, ದಮ್ಮಯ್ಯ, ಮಂಜು ನಾಯಕ್, ಅಭಿ, ಪ್ರಶಾಂತ, ಲಕ್ಷ್ಮಮ್ಮ ಇತರರಿದ್ದರು.