ಚನ್ನರಾಯಪಟ್ಟಣದ ಪುರಸಭೆ ಮುಂಭಾಗ ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಸಿ.ಎನ್.ಬಾಲಕೃಷ್ಣ ದನಗಳ ಜಾತ್ರೆಗೆ ಚಾಲನೆ ನೀಡಿದರು. .ಎನ್.ಮೋಹನ್, ಆರ್.ಯತೀಶ್‌ಕುಮಾರ್, ಸೋಮಶೇಖರ್, ವೆಂಕಟೇಶಮೂರ್ತಿ, ಎಂ.ಆರ್.ಅನಿಲ್, ಡಾ.ಬಿ.ಆರ್.ಯುವರಾಜ್ ಇತರರಿದ್ದರು.
- ಶಾಸಕ ಸಿ.ಎನ್. ಬಾಲಕೃಷ್ಣ
- ಚಂದ್ರಮೌಳೇಶ್ವರ ರಥೋತ್ಸವ
ಚನ್ನರಾಯಪಟ್ಟಣ: ದೇಸಿ ತಳಿಯ ಜಾನುವಾರುಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಇತಿಹಾಸ ಪ್ರಸಿದ್ಧ ಚಂದ್ರಮೌಳೇಶ್ವರ ರಥೋತ್ಸವದ ಅಂಗವಾಗಿ ಪಟ್ಟಣದ ಪುರಸಭಾ ಮುಂಭಾಗದಲ್ಲಿ ಶುಕ್ರವಾರ 87ನೇ ದನಗಳ ಜಾತ್ರೆಗೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಕೃಷಿ ಪದ್ಧತಿಯಿಂದ ಹಳ್ಳಿಗಳಲ್ಲಿ ದನಗಳನ್ನು ಸಾಕುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹಿಂದಿನ ಕಾಲದಲ್ಲಿ ಉಳುಮೆ ಮಾಡಲು ಪ್ರತಿ ರೈತನ ಮನೆಯಲ್ಲಿ ಒಂದು ಅಥವಾ ಎರಡು ಜೋಡಿ ಎತ್ತುಗಳು ಇರುತ್ತಿದ್ದವು. ಆದರೆ ಇಂದು ಉಳುಮೆ ಮಾಡುವ ರೈತರೇ ಇಲ್ಲವಾಗಿದ್ದಾರೆ. ನೇಗಿಲ ಯೋಗಿಗಳ ಅಭಾವದಿಂದ ರೈತರು ಈಗ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಂತಾಗಿದೆ ಎಂದರು.
ಹೈನುಗಾರಿಕೆ ಮಾಡುವ ಉದ್ದೇಶದಿಂದ ಸಾಕಿರುವ ಹಸುಗಳನ್ನು ಬಿಟ್ಟರೆ ಹಳ್ಳಿಗಳಲ್ಲಿ ನಾಟಿ ರಾಸುಗಳೇ ಇಲ್ಲವಾಗಿವೆ. ಹಸುಗಳು ನಮ್ಮ ಆರ್ಥಿಕತೆಯ ಬೆನ್ನೆಲುಬು. ದೇಸಿತಳಿ ರಾಸುಗಳ ರಕ್ಷಣೆ ಕೇವಲ ಉಳುಮೆ ಮಾಡಲು ಅಲ್ಲ. ಬದಲಗಿ ಅದೊಂದು ಸೇವೆ ಹಾಗೂ ಅದನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ. ನಮ್ಮ ಕಾಲಕ್ಕೆ ದೇಸಿ ರಾಸುಗಳ ಹಲವು ತಳಿಗಳು ನಶಿಸುವ ಹಂತ ತಲುಪಿವೆ. ಈಗಲಾದರೂ ಎಚ್ಚೆತ್ತು ದೇಸಿ ತಳಿ ರಾಸುಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಕರೊನಾ, ಗಂಟುರೋಗ ಮತ್ತು ಕಾಲುಬಾಯಿ ರೋಗದ ಹಿನ್ನೆಲೆಯಲ್ಲಿ ಏಳು ವರ್ಷಗಳಿಂದ ಸ್ಥಗಿತಗೊಂಡಿದ್ದ ದನಗಳ ಜಾತ್ರೆಯನ್ನು ಕಳೆದ ವರ್ಷದಿಂದ ಚಾಲನೆ ನೀಡಲಾಗಿದೆ ದನಗಳ ಜಾತ್ರೆ ಈ ಬಾರಿ ಸಣ್ಣ ಪ್ರಮಾಣದಲ್ಲಾದರೂ ಮುಂದಿನ ಬಾರಿ ರೈತರ ಸಹಕಾರದೊಂದಿಗೆ ದೊಡ್ಡ ಪ್ರಮಾಣದಲ್ಲಿ ನಡೆಸಲಾಗುವುದು. ಎಪಿಎಂಸಿ ಆವರಣದಲ್ಲಿ ದನಗಳ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ವಿದ್ಯುತ್ ದೀಪ, ರಾಸುಗಳಿಗೆ ಕುಡಿಯುವ ನೀರು, ಮೇವು, ಶುಚಿತ್ವ ಸೇರಿದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಫೆ.13ರವರೆಗೆ ದನಗಳ ಜಾತ್ರೆ ನಡೆಯಲಿದ್ದು, ಬೇರೆ ಜಿಲ್ಲೆಗಳಿಂದಲೂ ದನಗಳ ಆಗಮನವಾಗಿದೆ. ಎಪಿಎಂಸಿ ಮತ್ತು ಪುರಸಭೆಯ ಆಯ್ಕೆ ತಂಡ ಸೂಚಿಸಿದ 18 ಜೋಡಿಗಳಿಗೆ ಬಹುಮಾನಗಳನ್ನು ನೀಡಲಾಗುವುದು. ಫೆ.13ರಂದು ಎಪಿಎಂಸಿ ಆವರಣದ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದೆಂದು ತಿಳಿಸಿದರು.
ಪುರಸಭಾ ಮುಂಭಾಗದಿಂದ ಆರಂಭಗೊಂಡ ರಾಸುಗಳ ಮೆರವಣಿಗೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಸೇರಿದಂತೆ ಗಣ್ಯರು ಗೋಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಂಗಳ ವಾದ್ಯದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಸುಗಳ ಮೆರವಣಿಗೆ ನಡೆಸಿ, ಎಪಿಎಂಸಿ ಆವರಣದಲ್ಲಿ ದನಗಳ ಜಾತ್ರೆ ನಡೆಯುವ ಸ್ಥಳಕ್ಕೆ ಕರೆತರಲಾಯಿತು. ಹಾಸನ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ರೈತರು ತಮ್ಮ ರಾಸುಗಳನ್ನು ಕರೆತಂದು ರಾಸುಗಳ ಕೊಂಬಿಗೆ ಹೂ ಕಟ್ಟಿ ಸಿಂಗರಿಸಿದ್ದರು.
ಪುರಸಭಾ ಮಾಜಿ ಅಧ್ಯಕ್ಷ ಸಿ.ಎನ್.ಮೋಹನ್, ಮುಖ್ಯಾಧಿಕಾರಿ ಆರ್.ಯತೀಶ್‌ಕುಮಾರ್, ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶಮೂರ್ತಿ, ನಿರ್ದೇಶಕ ಎಂ.ಆರ್.ಅನಿಲ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಬಿ.ಆರ್.ಯುವರಾಜ್, ರೈತ ಸಂಘದ ಅಧ್ಯಕ್ಷ ರವಿಗೌಡಯ್ಯ, ಮುಖಂಡರಾದ ರವಿ, ಗಾರೆ ಕೃಷ್ಣ ಇತರರಿದ್ದರು.