ಕಾಡಾನೆಗಳ ಹಿಂಡು ಕುಪ್ಪಗೋಡುಗ್ರಾಮದ ಸಮೀಪ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿರುವುದು. 
ಹಾಸನ

ಕಾಡಾನೆ ದಾಳಿಗೆ ಆಟೋ ಜಖಂ

ಲಲಾಟಾಕ್ಷ ಎಸ್
ಬೇಲೂರು: ಮಲೆನಾಡು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಉಪಟಳ ದಿನೇ ದಿನೆ ಹೆಚ್ಚುತ್ತಿದ್ದು ತೋಟ, ಬೆಳೆ ನಾಶವಾಗುತ್ತಿದೆ. ಸೋಮವಾರ ಕಾಡಾನೆ ದಾಳಿಗೆ ಆಟೋ ಜಖಂಗೊಂಡಿದೆ.
ತಾಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ಬೀಟಮ್ ಗ್ರೂಪ್, ಭುವನೇಶ್ವರಿ, ಓಲ್ಡ್‌ಬೆಲ್ಟ್ ಸೇರಿದಂತೆ ಇತರೆ ಗುಂಪಿನ 50 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕೋಗೋಡು, ಕುಪ್ಪಗೋಡು, ಕಾನಹಳ್ಳಿ, ಲಕ್ಷ್ಮಿಪುರ, ಕುಂಬ್ರಿ ಕಾಡು, ಮಲಸಾವರ, ಚೀಕನಹಳ್ಳಿ ಗ್ರಾಮಗಳ ತೋಟ ಮತ್ತು ಕಾಡುಗಳಲ್ಲೆ ಬೀಡು ಬಿಟ್ಟಿವೆ. ಅದರಲ್ಲೂ ಚೀಕನಹಳ್ಳಿ, ಹುನುಗನಹಳ್ಳಿ, ಕುಪ್ಪಗೋಡು ಗ್ರಾಮಗಳ ಆಸುಪಾಸಿನಲ್ಲೆ ಕಳೆದ ಒಂದು ವಾರದಿಂದಲೂ ಓಡಾಡುತ್ತಿವೆ. ಇದರೊಂದಿಗೆ ಒಂಟಿ ಆನೆಯೊಂದು ಸಹ ಎಲ್ಲೆಂದರಲ್ಲಿ ಓಡಾಡಿ ಸಿಕ್ಕ ಸಿಕ್ಕ ಬೆಳೆಯನ್ನು ಹಾಳು ಮಾಡುತ್ತಿದೆ.
ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ಭಯದಿಂದ ಓಡಾಡಬೇಕಿದೆ.
ಸೋಮವಾರ ಬೆಳಗ್ಗೆ ಕಾಡಿನಿಂದ ಹೊರಬಂದು ಗ್ರಾಮದೊಳಗೆ ಪ್ರವೇಶಿಸಿ ಕೆಲ ಕಾಲ ಎಲ್ಲೆಂದರಲ್ಲಿ ಅಲೆದಾಡಿದ ಬಳಿಕ ಕುಪ್ಪುಗೋಡು ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರ ಮನೆ ಸಮೀಪಕ್ಕೆ ನುಗ್ಗಿದ ಒಂಟಿ ಕಾಡಾನೆ ಮನೆ ಮುಂದೆ ನಿಲ್ಲಿಸಿದ್ದ ಆಟೋವನ್ನು ಎಳೆದಾಡಿ ಜಖಂಗೊಳಿಸಿದೆ. ಕೆಲ ಸಮಯ ಸಮೀಪದ ಮರದ ಕೆಳಗೆ ನಿಂತು ಹಿಂದಕ್ಕೆ ತೆರಳಿದೆ. ಮನೆಯವರು, ಗ್ರಾಮಸ್ಥರು ಆತಂಕದಿಂದ ಹೊರಗೆ ಬರಲಿಲ್ಲ. ಒಂಟಿ ಆನೆ ಹಾಗೂ ಅಕ್ಕಪಕ್ಕದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವಂತೆ ಬೆಳೆಗಾರರು, ಕೂಲಿ ಕಾರ್ಮಿಕರು, ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
"

ಕುಪ್ಪಗೋಡು ಗ್ರಾಮದಲ್ಲಿ ಇಷ್ಟೆಲ್ಲ ಘಟನೆಯಾದರೂ ಸ್ಥಳಕ್ಕೆ ಅಧಿಕಾರಿಗಳು ಬಂದಿಲ್ಲ. ತಕ್ಷಣ ಅಧಿಕಾರಿಗಳು ಕಾಡಾನೆಗಳನ್ನು ಶಾಶ್ವತವಾಗಿ ಓಡಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ.

ಸಂತೋಷ್, ಕಾಫಿ ಬೆಳೆಗಾರ ಕೋಗೀಡು

ತಾಲೂಕಿನ ಕುಪ್ಪಗೋಡಿನಲ್ಲಿ ಸೋಮವಾರ ಒಂಟಿ ಸಲಗ ಗುಂಪಿನಿಂದ ಬೇರಾಗಿ ಆಕ್ರೋಶಗೊಂಡು ಮನೆ ಮುಂದೆ ಇದ್ದ ಆಟೋ ಜಖಂಗೊಳಿಸಿದೆ. ಈ ಆನೆಯನ್ನು ಈಗ ಸಿರಗುರ ಸಮೀಪದ ಕುಂಬ್ರಿ ಕಾಡಿನತ್ತ ಓಡಿಸಿ ಗುಂಪಿಗೆ ಸೇರಿಸಲಾಗಿದೆ. ಇತರೆ ಕಾಡಾನೆಗಳು ಈ ಭಾಗದಲ್ಲಿ ಓಡಾಡುತ್ತಿದ್ದು ಸಾರ್ವಜನಿಕು ಎಚ್ಚರ ವಹಿಸಬೇಕು.

ಯತೀಶ್, ವಲಯ ಅರಣ್ಯಧಿಕಾರಿ ಬೇಲೂರು