ಹಾಸನ ನಗರದ ಕಸ್ತೂರಬಾ ರಸ್ತೆಯ ಸಿಟಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸುಪ್ರಿಯಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. 
ಹಾಸನ

ರೆಸ್ಟೋರೆಂಟ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ರೆಸ್ಟೋರೆಂಟ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್
  • ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಬೆಂಕಿ ನಿಯಂತ್ರಣ

ಹಾಸನ:

ನಗರದ ಕಸ್ತೂರಬಾ ರಸ್ತೆಯ ಸಿಟಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸುಪ್ರಿಯಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿತು.

ಅಗ್ನಿಶಾಮಕ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಿಯಂತ್ರಿಸಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ.

ಬೆಳಗ್ಗೆ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸ್ಥಳ ಪರಿಶೀಲಿಸಿದಾಗ ಕಟ್ಟಡದ ನೆಲದಡಿ ಅಳವಡಿಸಲಾಗಿದ್ದ ವಿದ್ಯುತ್ ಕೇಬಲ್‌ಗಳಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಜಂಕ್ಷನ್ ಬಾಕ್ಸ್ ಹಾಗೂ ಮೀಟರ್ ಬೋರ್ಡ್ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿತು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ನಿಂಗರಾಜು ಮಾಹಿತಿ ನೀಡಿದರು.
ಬೆಂಕಿಗಿಂತಲೂ ದಟ್ಟ ಹೊಗೆಯೇ ಕಾರ್ಯಾಚರಣೆಗೆ ದೊಡ್ಡ ಸವಾಲಾಯಿತು. ಸಂಪೂರ್ಣ ನೆಲದಡಿ ಭಾಗ ಹೊಗೆಯಿಂದ ಆವರಿಸಿಕೊಂಡಿದ್ದರಿಂದ ಒಂದು ಅಡಿ ದೂರವೂ ಕಾಣದ ಸ್ಥಿತಿ ನಿರ್ಮಾಣವಾಗಿತ್ತು. ಸಿಬ್ಬಂದಿ ಕೃತಕ ಉಸಿರಾಟದ ಸಾಧನ ಧರಿಸಿ ಒಳಗೆ ಪ್ರವೇಶಿಸಿ ಕಾರ್ಯಾಚರಣೆ ನಡೆಸಿದರು.
ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಬಳಿಕ ಕಾರ್ಬನ್ ಡೈಆಕ್ಸೈಡ್, ಡ್ರೈ ಕೆಮಿಕಲ್ ಪೌಡರ್ ಹಾಗೂ ನೀರಿನ ಸಿಂಪಡಣೆಯಿಂದ ಬೆಂಕಿ ನಂದಿಸಲಾಯಿತು. ಬೆಂಕಿಯ ತೀವ್ರತೆಯಿಂದಾಗಿ ಹೆಚ್ಚುವರಿ ಅಗ್ನಿಶಾಮಕ ವಾಹನವನ್ನು ಕರೆಸಿಕೊಳ್ಳಲಾಯಿತು. ಸತತ ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿ ಮತ್ತು ಹೊಗೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಯಿತು. ಅಂಡರ್‌ಗ್ರೌಂಡ್‌ನಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಮುಚ್ಚಿದ ಕೊಠಡಿಗಳಲ್ಲಿ ಅಳವಡಿಸಿರುವುದು ತುರ್ತು ಸಂದರ್ಭದಲ್ಲಿ ಅಡ್ಡಿಯಾಗುತ್ತದೆ. ವಾಣಿಜ್ಯ ಕಟ್ಟಡಗಳಲ್ಲಿ ಸಮರ್ಪಕ ಗಾಳಿ ಸಂಚಾರ, ಹೊಗೆ ಹೊರಹೋಗುವ ವ್ಯವಸ್ಥೆ ಹಾಗೂ ತುರ್ತು ನಿರ್ಗಮನ ದ್ವಾರ ಕಡ್ಡಾಯವಾಗಿ ಇರಬೇಕು ಎಂದು ನಿಂಗರಾಜು ಸಲಹೆ ನೀಡಿದರು.