ಅರಕಲಗೂಡು ತಾಲೂಕಿನ ಹಂಪಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ಸಮಾಜ ಸೇವಕ ಲಕ್ಕೂರು ಕಾಂತರಾಜು ನೋಟ್ ಪುಸ್ತಕ ವಿತರಿಸಿದರು. ಕುಮಾರ್, ಆನಂದ್ ಇತರರಿದ್ದರು. 
ಹಾಸನ

ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿ

ಬಾಲಮುರಳಿಕೃಷ್ಣ
ಅರಕಲಗೂಡು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಮಾಜ ಸೇವಕ ಲಕ್ಕೂರು ಕಾಂತರಾಜು ಹೇಳಿದರು.
ತಾಲೂಕಿನ ಹಂಪಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು, ಹಳ್ಳಿಗಾಡಿನ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟದ ನಡುವೆ ಮಕ್ಕಳ ಶಿಕ್ಷಣವನ್ನು ಮುಂದುವರಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾಗುವ ನೋಟ್ ಪುಸ್ತಕ, ಪೆನ್, ಶಾಲಾ ಬ್ಯಾಗ್ ಸೇರಿದಂತೆ ಶೈಕ್ಷಣಿಕ ಸಾಮಗ್ರಿಗಳನ್ನು ನೀಡುವುದರಿಂದ ಅವರ ವಿದ್ಯಾಭ್ಯಾಸಕ್ಕೆ ಉತ್ತೇಜನ ದೊರೆಯುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ನೀಡುವ ಸಹಾಯವು ಸಮಾಜದ ಭವಿಷ್ಯಕ್ಕೆ ಮಾಡುವ ಹೂಡಿಕೆಯಾಗಿದ್ದು, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಮಕ್ಕಳು ಕೂಡ ನಿಯಮಿತವಾಗಿ ಶಾಲೆಗೆ ಹಾಜರಾಗುವುದು, ಶಿಸ್ತು ಮತ್ತು ಪರಿಶ್ರಮದಿಂದ ಓದುವುದು ಜೀವನದಲ್ಲಿ ಯಶಸ್ಸು ತಂದುಕೊಡುತ್ತದೆ. ಯಾವುದೇ ಸಾಧನೆಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಕುಮಾರ್, ಮುಖ್ಯ ಶಿಕ್ಷಕ ಆನಂದ, ಸಹ ಶಿಕ್ಷಕರಾದ ಭಾಸ್ಕರ್, ಇಂದುಮತಿ, ಸುನಿತಾ ಇತರರಿದ್ದರು.