ನಗರದ ಲಕ್ಷ್ಮೀಪುರ ಬಡಾವಣೆಯ ಶ್ರೀ ಆದಿಚುಂಚನಗಿರಿ ಆಂಗ್ಲಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು. 
ಹಾಸನ

ಆಹಾರಾಭ್ಯಾಸ ಮಗುವಿನ ದೈಹಿಕ ಆರೋಗ್ಯದ ಆಧಾರ

ಪ್ರಮುಖ ಮುಖ್ಯಾಂಶಗಳು

  • ವೈದ್ಯೆ ಡಾ.ಉಷಾ ಶಿವಾನಂದ್ ಅಭಿಮತ
  • ಶ್ರೀ ಆದಿಚುಂಚನಗಿರಿ ಆಂಗ್ಲಶಾಲೆಯಲ್ಲಿ ಗ್ರಾಜುಯೇಷನ್ ಡೇ
ಅರಸೀಕೆರೆ: ಮಕ್ಕಳ ಆರೋಗ್ಯದ ಕಾಳಜಿ ಮಗುವಿನ ಎಳೆತನದಿಂದಲೇ ಶುರುವಾಗಬೇಕು. ತಾಯಿ ನೀಡುವ ಆಹಾರಾಭ್ಯಾಸದ ಮಾರ್ಗದರ್ಶನ ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಮೂಲ ಆಧಾರ ಎಂದು ವೈದ್ಯೆ ಡಾ.ಉಷಾ ಶಿವಾನಂದ್ ಹೇಳಿದರು.
ನಗರದ ಲಕ್ಷ್ಮೀಪುರ ಬಡಾವಣೆಯ ಶ್ರೀ ಆದಿಚುಂಚನಗಿರಿ ಆಂಗ್ಲಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯವನ್ನು ಹಾಳು ಮಾಡುವಂತಹ ಜಂಕ್‌ಫುಡ್ಸ್, ಬೇಕರಿ ಪದಾರ್ಥಗಳು, ಕರಿದ ತಿಂಡಿಗಳನ್ನು ನಿರಂತರವಾಗಿ ಆಹಾರದ ಭಾಗವಾಗಿ ಬಳಸಬಾರದು. ಮನೆ ಪರಿಸರದಲ್ಲಿರುವ ತುಳಸಿ, ಪುದೀನಾ, ದೊಡ್ಡಪತ್ರೆ, ಕರಿಬೇವು, ಅಲೋವೆರಾ ಮಕ್ಕಳ ಆರೋಗ್ಯ ವೃದ್ಧಿಗೆ ಸಹಕಾರಿಯಾಗಲಿವೆ. ಇಂಥ ಔಷಧೀಯ ಗುಣವುಳ್ಳ ಗಿಡಮೂಲಿಕೆಗಳ ಸೊಪ್ಪು, ತರಕಾರಿಗಳ ರುಚಿಯನ್ನು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ಆಹಾರ ಖಾದ್ಯಗಳಲ್ಲಿ ಬಳಸಿರಿ ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕಿ ಜ್ಞಾನೇಶ್ವರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸದ ಆಸಕ್ತಿ, ಶ್ರದ್ಧೆ, ಕಲಿಕೆ ಬಗ್ಗೆ ಒಲವು, ತಾಯಂದಿರು ಪ್ರಾರಂಭಿಸಿದಂತೆ ನಡೆಯುತ್ತದೆ. ನಂತರ ಶಾಲೆ ವಾತಾವರಣ ಶಿಕ್ಷಕರ ಪ್ರೀತಿ, ವಿಶ್ವಾಸ ಮಗುವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ. ಎಳೆ ಮನಸುಗಳಲ್ಲಿ ನಾವು, ನಮ್ಮವರು, ಬಂಧುತ್ವ, ಭ್ರಾತೃತ್ವ ,ಕಲೆ, ಸಂಸ್ಕೃತಿ, ಶಿಸ್ತು ಮತ್ತು ಸಂಯಮದ ಬೀಜವನ್ನು ಬಿತ್ತಬೇಕು ಎಂದು ಹೇಳಿದರು. ಮಕ್ಕಳಿಗೆ ಗ್ರಾಜುಯೇಷನ್ ಸರ್ಟಿಫಿಕೇಟ್ ವಿತರಿಸಲಾಯಿತು.