ತುಂಬಿ ಹರಿಯುತ್ತಿರುವ ಹಳೇಬೀಡು ಗ್ರಾಮದ ಐತಿಹಾಸಿಕ ದ್ವಾರಸಮುದ್ರ ಕೆರೆ 
ಹಾಸನ

ಒಂದೇ ವಾರಕ್ಕೆ ದ್ವಾರಸಮುದ್ರ ಕೆರೆ ಭರ್ತಿ

ಹಳೇಬೀಡು: ಎತ್ತಿನಹೊಳೆ ನಾಲೆಯಲ್ಲಿ ನೀರು ಹರಿಸಿದ ಪರಿಣಾಮ ಇಲ್ಲಿನ ಐತಿಹಾಸಿಕ ದ್ವಾರಸಮುದ್ರ ಕೆರೆಯ ಒಡಲು ಒಂದೇ ವಾರಕ್ಕೆ ಭರ್ತಿಯಾಗಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ತುಂಬುತ್ತಿದ್ದ ಕೆರೆಯು ಈ ಬಾರಿ ಮಳೆಯ ಕೊರತೆ ನಡುವೆಯೂ ಜುಲೈ ಆರಂಭದಲ್ಲೇ ಕೋಡಿಬಿದ್ದಿದ್ದು, ಮುಂಬರುವ ದಿನಗಳಲ್ಲಿ ಕೆರೆಗೆ ಹೆಚ್ಚಿನ ನೀರು ಹರಿದುಬರುವ ಸಾಧ್ಯತೆಯಿದೆ. ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಕಳೆದ ವಾರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಕಲೇಶಪುರ ಸಮೀಪದ ಎತ್ತಿನಹೊಳೆ ಜಾಕ್ವೆಲ್‌ನಿಂದ ನೀರು ಎತ್ತುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಅರಣ್ಯ ಪ್ರದೇಶದ ಸಮಸ್ಯೆಯ ಕಾರಣದಿಂದ ನಾಲೆಯ ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗಾಗಿ ಎತ್ತಿನಹೊಳೆ ಚೆಕ್ ಡ್ಯಾಂನಲ್ಲಿ ಸಂಗ್ರಹವಾಗುತ್ತಿರುವ ನೀರನ್ನು ಹಳೇಬೀಡು ಕೆರೆಗೆ ನೀರು ಹರಿದು ಬರುವ ಹಳ್ಳಕ್ಕೆ ಸೇರಿಸಲಾಗುತ್ತಿದೆ. ಇದರ ಪರಿಣಾಮ ದ್ವಾರಸಮುದ್ರ ಕೆರೆಯ ಜತೆಗೆ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯದವರೆಗೂ ನೀರು ತಲುಪುತ್ತಿದೆ.
ಭರ್ತಿಯಾಗಿರುವ ಕೆರೆಯ ಒಡಲಿಗೆ ಸ್ಥಳೀಯರು ಗಂಗಾಪೂಜೆ ನೆರವೇರಿಸಲು ಸಿದ್ಧರಾಗುತ್ತಿದ್ದು, ರೈತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಪುಷ್ಪಗಿರಿ ಶ್ರೀಗಳ ಸಮ್ಮುಖದಲ್ಲಿ ಶಾಸಕರು ಹಾಗೂ ಇತರ ಮುಖಂಡರು ಬಾಗಿನ ಅರ್ಪಣೆಗೆ ತಯಾರಿ ನಡೆಸುತ್ತಿದ್ದಾರೆ.
ಎತ್ತಿನಹೊಳೆ ಯೋಜನೆಯಡಿ ಸಕಲೇಶಪುರ ತಾಲೂಕಿನಿಂದ ನಿರ್ಮಿಸಲಾಗಿರುವ ನಾಲೆಯು ಹಳೇಬೀಡು ಸಮೀಪದ ಅಡಗೂರು ಐದಳ್ಳದ ಬಳಿ ಹಾದುಹೋಗುತ್ತದೆ. ಇದಕ್ಕೆ ಸಮೀಪದಲ್ಲೇ ದ್ವಾರಸಮುದ್ರ ಕೆರೆಗೆ ನೀರು ಹರಿದು ಬರುವ ಕಾಗೆದಳ್ಳವೂ ಇದೆ. ಐದಳ್ಳದ ಬಳಿ ನಾಲೆ ಕಾಮಗಾರಿಯು ಅರಣ್ಯಪ್ರದೇಶದ ಸಮಸ್ಯೆಯ ಕಾರಣಗಳಿಂದ ಸ್ಥಗಿತಗೊಂಡಿರುವುದರಿಂದ ಎತ್ತಿನಹೊಳೆ ನಾಲೆಯಲ್ಲಿ ಗುಡ್ಡಗಳಿಂದ ಹರಿದು ಬರುವ ನೀರು ಶೇಖರಣೆಯಾಗುತ್ತಿದೆ. ಒರತೆ ಹಿಮ್ಮುಖವಾಗಿ ಒತ್ತುವ ಕಾರಣ ನೀರನ್ನು ಕಾಗೆದಳ್ಳಕ್ಕೆ ಬಿಡಲಾಗಿದೆ. ಹೀಗಾಗಿ ದ್ವಾರಸಮುದ್ರ ಕೆರೆಗೆ ಯಥೇಚ್ಛ ನೀರು ಹರಿದು ಬರುತ್ತಿದ್ದು, ಇದು ಮುಂದೆ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದ ಕೆರೆಯನ್ನು ಸೇರುತ್ತದೆ. ಅಲ್ಲಿಂದ ವೇದಾವತಿ ಮಾರಿಕಣಿವೆ ಮೂಲಕ ವಾಣಿ ವಿಲಾಸ ಸಾಗರವನ್ನು ಸೇರಿ ಕೃಷ್ಣಾ ಜಲಾನಯನ ಪಾತ್ರವನ್ನು ತಲುಪುತ್ತದೆ. ಹಳೇಬೀಡು ಕೆರೆಯು ತುಂಬುವುದರಿಂದ ಬಯಲು ಸೀಮೆಯ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ಅನುಕೂಲವಾಗಲಿದೆ.