ಯುವಕರನ್ನೇ ಗುರಿಯಾಗಿಸಿದ ಸಂಘಟಿತ ಜಾಲ
- ಹಾಸನದಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಳ
- 2026ರಲ್ಲಿ 167 ಕೇಸ್, 280 ಮಂದಿ ಬಂಧನ
- ಯುವಕರನ್ನೇ ಗುರಿಯಾಗಿಸಿದ ಸಂಘಟಿತ ಜಾಲ
ಹಾಸನ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಿದ್ದು, ಈ ವರ್ಷ ದಾಖಲಾಗಿರುವ ಗಾಂಜಾ ಹಾಗೂ ಸಿಂಥೆಟಿಕ್ ಡ್ರಗ್ಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿ ಮಟ್ಟ ತಲುಪಿದೆ.
ಕಳೆದ ಐದು ವರ್ಷದಲ್ಲಿ ನೋಡಿದರೆ, 2026ರಲ್ಲಿಯೇ 167 ಪ್ರಕರಣಗಳು ದಾಖಲಾಗಿದ್ದು, 280 ಮಂದಿ ಬಂಧನವಾಗಿದೆ. ಪೊಲೀಸ್ ಇಲಾಖೆ ನಿರಂತರ ಕಾರ್ಯಾಚರಣೆ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಗಾಂಜಾ ಜಾಲವನ್ನು ಸಂಪೂರ್ಣ ನಿಯಂತ್ರಿಸುವುದು ಸವಾಲಾಗಿದೆ.
ಜಿಲ್ಲೆಯಲ್ಲಿ ಗಾಂಜಾ ಬೆಳೆಯುವ ಪ್ರಕರಣಗಳು ವಿರಳವಾಗಿದ್ದರೂ, ಮಂಗಳೂರು, ಮಡಿಕೇರಿ, ಮೈಸೂರು ಹಾಗೂ ಚಿಕ್ಕಮಗಳೂರು ಭಾಗಗಳಿಂದ ಗಾಂಜಾ ಅಕ್ರಮವಾಗಿ ಸರಬರಾಜಾಗುತ್ತಿರುವುದು ಹಲವು ಪ್ರಕರಣಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯುವಜನರನ್ನು ಗುರಿಯಾಗಿಸಿಕೊಂಡು ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
2022ರಲ್ಲಿ 70 ಪ್ರಕರಣಗಳು ದಾಖಲಾಗಿದ್ದು, 11.5 ಕೆಜಿ ಗಾಂಜಾ ವಶಪಡಿಸಿಕೊಂಡು 99 ಜನರನ್ನು ಬಂಧಿಸಲಾಗಿತ್ತು. ಅದೇ ರೀತಿ 2023ರಲ್ಲಿ ಪ್ರಕರಣಗಳ ಸಂಖ್ಯೆ 80ಕ್ಕೆ ಏರಿಕೆಯಾಗಿದ್ದು, 49 ಕೆಜಿ ಗಾಂಜಾ ಹಾಗೂ 16 ಗ್ರಾಂ ಡ್ರಗ್ಸ್ ವಶಪಡಿಸಿಕೊಂಡು 103 ಜನರನ್ನು ಬಂಧಿಸಲಾಗಿದೆ. 2024ರಲ್ಲಿ 131 ಪ್ರಕರಣಗಳು ದಾಖಲಾಗಿ 24 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, 186 ಜನ ಬಂಧನಕ್ಕೊಳಗಾಗಿದ್ದರು. 2025ರಲ್ಲಿ 109 ಪ್ರಕರಣಗಳಲ್ಲಿ 134 ಕೆಜಿ ಗಾಂಜಾ ಹಾಗೂ 136 ಗ್ರಾಂ ಡ್ರಗ್ಸ್ ವಶಪಡಿಸಿಕೊಂಡು 173 ಜನರನ್ನು ಬಂಧಿಸಲಾಗಿತ್ತು.
ಆದರೆ 2026ರಲ್ಲಿ ಇನ್ನೂ ವರ್ಷ ಪೂರ್ಣಗೊಳ್ಳುವ ಮೊದಲೇ 167 ಪ್ರಕರಣಗಳು ದಾಖಲಾಗಿದ್ದು, 77 ಕೆಜಿ ಗಾಂಜಾ ಹಾಗೂ 134 ಗ್ರಾಂ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 280 ಮಂದಿಯನ್ನು ಬಂಧಿಸಿರುವುದು ಜಿಲ್ಲೆಯಲ್ಲಿ ಮಾದಕ ವಸ್ತು ಜಾಲದ ವಿಸ್ತಾರಕ್ಕೆ ಸಾಕ್ಷಿಯಾಗಿದೆ.
ಪೊಲೀಸರ ತನಿಖೆಯಲ್ಲಿ 25ರಿಂದ 40 ವರ್ಷದೊಳಗಿನ ಯುವಕರೇ ಗಾಂಜಾ ಮತ್ತು ಡ್ರಗ್ಸ್ ಸೇವನೆ ಹಾಗೂ ಸಾಗಣೆ ಪ್ರಕರಣಗಳಲ್ಲಿ ಹೆಚ್ಚಾಗಿ ಸಿಕ್ಕಿಬೀಳುತ್ತಿರುವುದು ಬೆಳಕಿಗೆ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಕೂಡ ಈ ದುಶ್ಚಟದತ್ತ ಆಕರ್ಷಿತರಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ.
ಮಾದಕ ವ್ಯಸನದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಭನ್ವಿತಾ ಅವರ ಮಾರ್ಗದರ್ಶನದಲ್ಲಿ ಜು.15ರಿಂದ ತಿಂಗಳ ಅಂತ್ಯದವರೆಗೆ ಬೇಡ ಬ್ರೋ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಕಾರ್ಯಕ್ರಮಗಳು ನಡೆಯುತ್ತಿವೆ.
ಕಿಂಗ್‌ಪಿನ್‌ಗಳ ವಿರುದ್ಧ ಕಠಿಣ ಕ್ರಮ:
ಗಾಂಜಾ ಜಾಲದಲ್ಲಿ ಪದೇ ಪದೆ ಭಾಗಿಯಾಗುತ್ತಿದ್ದ ಆರೋಪದಡಿ ಹಾಸನ ನಗರದ ರಾಹಿಲ್ ಮತ್ತು ಆದಿಲ್ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. 2023ರಲ್ಲಿ ಇಬ್ಬರಿಗೂ ಗಡಿಪಾರು ಶಿಕ್ಷೆ ವಿಧಿಸಲಾಗಿತ್ತು. ಬಳಿಕ 2024ರಲ್ಲಿ ರಾಹಿಲ್ ವಿರುದ್ಧ ಗುಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, 2026ರಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಿ ಕಠಿಣ ಸಂದೇಶ ರವಾನಿಸಲಾಗಿದೆ.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಗಾಂಜಾ ಅಥವಾ ಡ್ರಗ್ಸ್ ಸಾಗಾಟ, ಮಾರಾಟ ಅಥವಾ ಸೇವನೆ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ.
ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲೆಯಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಣಿಕೆ ಹೆಚ್ಚುತ್ತಿರುವ ಬಗ್ಗೆ ವ್ಯಕ್ತವಾಗುತ್ತಿರುವ ಆತಂಕವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ, ಸಮಾಜದ ಭವಿಷ್ಯಕ್ಕೆ ದೊಡ್ಡ ಸವಾಲಾಗಿದೆ. ಮಾದಕ ವಸ್ತುಗಳ ಜಾಲದಲ್ಲಿ ಸಿಲುಕುತ್ತಿರುವ ಯುವಕರು ತಮ್ಮ ಶಿಕ್ಷಣ, ಉದ್ಯೋಗ ಮತ್ತು ಕುಟುಂಬ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ತಡೆಯಲು ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ, ಜಿಲ್ಲಾ ಆಡಳಿತ, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಮಾತ್ರ ಮಾದಕ ವ್ಯಸನವನ್ನು ನಿಯಂತ್ರಿಸಲು ಸಾಧ್ಯ. ಶಾಲೆ ಹಾಗೂ ಕಾಲೇಜುಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ಯುವಜನರನ್ನು ಕ್ರೀಡೆ, ಶಿಕ್ಷಣ ಹಾಗೂ ಸಾಮಾಜಿಕ ಚಟುವಟಿಕೆಗಳತ್ತ ಪ್ರೋತ್ಸಾಹಿಸುವುದು ಅಗತ್ಯವಾಗಿದೆ.