ಹೇಮಾವತಿ ನಾಲೆ 
ಹಾಸನ

ನಾಲೆಯಿಂದ ಕುಡಿವ ನೀರು ಪೂರೈಕೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ನಾಲೆಯಿಂದ ಕುಡಿವ ನೀರು ಪೂರೈಕೆ
  • ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆ ಮೂಲಕ ಹರಿಯಲಿದೆ ಜಲ
  • ಜೀವಜಲ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ಸರ್ಕಾರ ಮುಂದು
ಹಾಸನ: ದಿನೇದಿನೆ ಹೆಚ್ಚುತ್ತಿರುವ ತಾಪಮಾನದಿಂದ ಕುಸಿದ ಅಂತರ್ಜಲ ಮಟ್ಟ, ಒಣಗುತ್ತಿರುವ ಕೆರೆ-ಕಟ್ಟೆಗಳು ಹಾಗೂ ಗ್ರಾಮೀಣ ಭಾಗದಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೇಮಾವತಿ ಜಲಾಶಯದಿಂದ ಎಡದಂಡೆ ನಾಲೆ ಮೂಲಕ ನೀರು ಹರಿಸಲು ಸರ್ಕಾರ ಮುಂದಾಗಿದೆ.
ಇತ್ತೀಚೆಗೆ ನಡೆದ ಹೇಮಾವತಿ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಲಹಾ ಸಮಿತಿ ಸಭೆ ನಿರ್ಣಯದಂತೆ ಮೇ 10ರಿಂದ ಮೇ 19ರವರೆಗೆ ಹೇಮಾವತಿ ಅಣೆಕಟ್ಟೆ ವ್ಯಾಪ್ತಿಯ ಎಡದಂಡೆ ನಾಲೆ ಮೂಲಕ ನೀರು ಹರಿಸಲು ತೀರ್ಮಾನಿಸಲಾಗಿದೆ.
ಹೇಮಾವತಿ ಜಲಾಶಯ ಒಟ್ಟು 37.103 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ 17.126 ಟಿಎಂಸಿ ನೀರು ಲಭ್ಯವಿದ್ದು, ಅದರಲ್ಲಿ ಕುಡಿಯುವ ನೀರಿಗಾಗಿ ಮೀಸಲಿಟ್ಟ ಪ್ರಮಾಣವನ್ನು ಮಾತ್ರ ಬಳಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ನೀರನ್ನು ಎಡದಂಡೆ ನಾಲೆ ಮೂಲಕ ಕೆರೆ, ಕಟ್ಟೆ ಹಾಗೂ ಪ್ರಮುಖ ಕುಡಿಯುವ ನೀರಿನ ಮೂಲಗಳಿಗೆ ಹರಿಸಲಾಗುತ್ತದೆ. ಈ ನೀರನ್ನು ಸಂಪೂರ್ಣವಾಗಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರವಾಗಿದ್ದು, ಯಾವುದೇ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಬೇಸಿಗೆಯ ಬಿಸಿಲಿನ ತೀವ್ರತೆ
ಈ ವರ್ಷ ಹಾಸನ ಸೇರಿ ದಕ್ಷಿಣ ಒಳನಾಡಿನ ಹಲವೆಡೆ ಉಷ್ಣಾಂಶ ಏರಿಕೆಯಾಗಿದ್ದು, ಮಳೆ ಕೊರತೆಯಿಂದ ಜಲಮೂಲಗಳು ಬತ್ತಲಾರಂಭಿಸಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳು ಒಣಗಿರುವುದರಿಂದ ಕುಡಿಯುವ ನೀರಿನ ಪೂರೈಕೆ ದೊಡ್ಡ ಸವಾಲಾಗಿತ್ತು. ಅನೇಕ ಗ್ರಾಮ ಪಂಚಾಯಿತಿಗಳು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವ ಪರಿಸ್ಥಿತಿ ಎದುರಿಸುತ್ತಿದ್ದವು. ಈ ಹಿನ್ನೆಲೆ ಜನ ಹಾಗೂ ಜಾನುವಾರುಗಳಿಗೆ ನೀರಿನ ತೊಂದರೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ. ನೀರು ಹರಿಸುವುದರಿಂದ ಹಾಸನ ಜಿಲ್ಲೆಯ ಅನೇಕ ಭಾಗಗಳ ಜತೆಗೆ ತುಮಕೂರು, ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಕೆಲವು ಪ್ರದೇಶಗಳಿಗೂ ಅನುಕೂಲವಾಗಲಿದೆ.
ಹೇಮಾವತಿ ಎಡದಂಡೆ ನಾಲೆ ವ್ಯಾಪ್ತಿಯಲ್ಲಿರುವ ನೂರಾರು ಕೆರೆಗಳು ಕಳೆದ ಕೆಲವು ತಿಂಗಳಿಂದ ಬಹುತೇಕ ಬತ್ತಿಹೋಗಿದ್ದವು. ನಾಲೆಗಳಿಗೆ ನೀರು ಹರಿದರೆ ಕೆರೆಗಳು ತುಂಬಿ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಮೂಲಗಳು ಪುನಶ್ಚೇತನಗೊಳ್ಳುವ ನಿರೀಕ್ಷೆ ಇದೆ.
ನೀರಿನ ದುರುಪಯೋಗಕ್ಕೆ ಅವಕಾಶ ಇಲ್ಲ
ಜಿಲ್ಲಾಡಳಿತ ಹಾಗೂ ಹೇಮಾವತಿ ಯೋಜನಾ ಅಧಿಕಾರಿಗಳು ನೀರಿನ ಬಳಕೆಯಲ್ಲಿ ಎಚ್ಚರಿಕೆ ವಹಿಸಿದ್ದಾರೆ. ನಾಲೆಗಳಲ್ಲಿ ಹರಿಯುವ ನೀರನ್ನು ಕೃಷಿಗೆ ತಿರುಗಿಸಬಾರದು ಎಂದು ಅಧಿಕಾರಿಗಳು ಸೂಚಿಸಿದ್ದು, ಅಚ್ಚುಕಟ್ಟು ಪ್ರದೇಶದ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ನೀರಿನ ಸೋರಿಕೆ, ಅಕ್ರಮ ತಡೆಗಟ್ಟಲು ವಿಶೇಷ ನಿಗಾ ವಹಿಸಲು ಸೂಚಿಸಲಾಗಿದೆ. ನಾಲೆಗಳ ಬದಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು, ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಸಹಕಾರ ಪಡೆಯಲಾಗುವುದು ಎಂದು ಹೇಮಾವತಿ ಜಲಾಶಯ ಯೋಜನೆ ಅಧಿಕಾರಿಗಳು ತಿಳಿಸಿದ್ದಾರೆ.
ನಾಲೆಗಳಿಗೆ ನೀರು ಹರಿಸುವ ಕ್ರಮ ತಾತ್ಕಾಲಿಕವಾಗಿದ್ದು, ಪೂರ್ವ ಮುಂಗಾರು ಮಳೆಯ ಸ್ಥಿತಿಗತಿಗಳನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಜಲಾನಯನ ಪ್ರದೇಶಗಳಲ್ಲಿ ಸಮರ್ಪಕ ಮಳೆಯಾದರೆ ನಾಲೆ ನೀರು ಹರಿಸುವ ಅವಧಿಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಮಳೆ ಕೊರತೆ ಮುಂದುವರಿದರೆ ಕುಡಿಯುವ ನೀರಿನ ಅಗತ್ಯಕ್ಕೆ ಅನುಗುಣವಾಗಿ ಮತ್ತಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಜಲಾಶಯದ ನೀರಿನ ಮಟ್ಟ:
ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922.00 ಅಡಿಗಳಾಗಿದ್ದು, ಗುರುವಾರ ನೀರಿನ ಮಟ್ಟ 2895.46 ಅಡಿಗಳಷ್ಟಿದೆ. 37.103 ಟಿಎಂಸಿ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 17.126 ಟಿಎಂಸಿ ನೀರಿನ ಸಂಗ್ರಹವಾಗಿದೆ. 49 ಕ್ಯೂಸೆಕ್ ಒಳಹರಿವಿದೆ. 300 ಕ್ಯೂಸೆಕ್ ಹೊರಹರಿವಿವೆ.
ಎಡದಂಡೆ ನಾಲೆ ನೀರು ಎಲ್ಲೆಲ್ಲಿಗೆ?:
ಹೇಮಾವತಿ ಜಲಾಶಯದ (ಗೊರೂರು ಅಣೆಕಟ್ಟು) ಎಡದಂಡೆ ನಾಲೆ ಹಾಸನ, ತುಮಕೂರು ಮತ್ತು ಮಂಡ್ಯ ಜಿಲ್ಲೆಗಳ ಸುಮಾರು 195,000 ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ 214 ಕಿ.ಮೀ. ಉದ್ದದ ಪ್ರಮುಖ ಕಾಲುವೆಯಾಗಿದೆ. ಈ ನಾಲೆಯು ಪ್ರಮುಖವಾಗಿ ಬಾಗೂರು-ನವಿಲೆ ಸುರಂಗ ಮಾರ್ಗದ ಮೂಲಕ ನೀರನ್ನು ಹರಿಸಿ, ತುಮಕೂರು ಭಾಗದಲ್ಲಿನ ಕೆರೆಗಳನ್ನು ತುಂಬಿಸಲು ಸಹಾಯ ಮಾಡುತ್ತದೆ. ತುಮಕೂರು ಭಾಗದ ನಾಲೆ ಸುಮಾರು 2400 ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯ ಹೊಂದಿದೆ.
ಹೇಮಾವತಿ ಯೋಜನಾ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಹಾಗೂ ಅಚ್ಚುಕಟ್ಟುದಾರರು ನೀರಿನ ಸಮರ್ಪಕ ನಿರ್ವಹಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕು. ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಈ ನೀರನ್ನು ಬಳಸಬೇಕು.
ಜಿ.ಕೆ.ಜ್ಯೋತಿ ಸೂಪರಿಂಟೆಂಡಿಂಗ್ ಇಂಜಿನಿಯರ್, ಹೇಮಾವತಿ ಯೋಜನಾ ವೃತ್ತ, ಗೊರೂರು