ಡಾ.ಸೂರಜ್ ರೇವಣ್ಣ  
ಹಾಸನ

ಸರ್ಕಾರದ ನಡೆಗೆ ಡಾ.ಸೂರಜ್ ರೇವಣ್ಣ ಅಸಮಾಧಾನ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ನಡೆಗೆ ಡಾ.ಸೂರಜ್ ರೇವಣ್ಣ ಅಸಮಾಧಾನ
  • ನಿಗಮ, ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನ ಮಾನ ನೀಡಿ, ವೇತನ, ಬಾಡಿಗೆ ಹೆಚ್ಚಳ ಮಾಡಿರುವುದಕ್ಕೆ ಆಕ್ರೋಶ
ಹಾಸನ: ನಿಗಮ, ಮಂಡಳಿ ಅಧ್ಯಕ್ಷರಿಗೆ ಸಚಿವ ದರ್ಜೆ ಸ್ಥಾನಮಾನ ನೀಡಿ, ವೇತನ, ಬಾಡಿಗೆ ಹೆಚ್ಚಳ ಮಾಡಿರುವುದನ್ನು ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಖಂಡಿಸಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಅರಕಲಗೂಡು ತಾಲೂಕಿನ, ಕೆಲಗಳಲೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಆರ್ಥಿಕ ಪರಿಸ್ಥಿತಿ, ದುರ್ಬಲತನವನ್ನು ಇಡೀ ರಾಜ್ಯದ ಜನ ನೋಡುತ್ತಿದ್ದಾರೆ. ಒಂದೆಡೆ ಗ್ಯಾರಂಟಿಗಳ ಹಾವಳಿ, ಇನ್ನೊಂದೆಡೆ ಅನುದಾನ ಅಭಾವ ವಿರೋಧ ಪಕ್ಷದವರು ಬೇಕಾಗಿಲ್ಲ. ಆಡಳಿತದ ಪಕ್ಷದ ಶಾಸಕರು ನಮಗೆ ಅನುದಾನ ಕೊಟ್ಟಿಲ್ಲ, ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತಿಲ್ಲ ಎಂದರು.
ಎಲ್ಲೂ ಶಾಶ್ವತವಾದ, ಸಾರ್ವಜನಿಕರಿಗೆ ಅನುಕೂಲವಾಗುವ, ಅವಶ್ಯಕತೆ ಇರುವ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಾಕಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಕೊಟ್ಟಿದ್ದರು. ಈ ಗ್ಯಾರಂಟಿಗಳೆಲ್ಲಾ ಚುನಾವಣೆಗೋಸ್ಕರ. ಅದರಿಂದ ರಾಜ್ಯದಲ್ಲಿ ಯಾರಿಗೂ ಏನು ಒಳ್ಳೆಯದಾಗಲ್ಲ ಎಂದರು.
ನಮ್ಮ ಪಕ್ಷ ಸದೃಢವಾಗಿದೆ. ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಹುತೇಕ ಚುನಾವಣೆಗಳಲ್ಲಿ ನಮ್ಮ ಪಕ್ಷ ಮೇಲುಗೈ ಸಾಧಿಸಿದೆ. ಯಾವುದೇ ಒಳ, ಹೊರ ಬೆಂಬಲ ಇಲ್ಲದೆ ಜಯ ಸಾಧಿಸಿ ಉತ್ತಮ ಪರಿಸ್ಥಿತಿಯಲ್ಲಿದೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಪ್ರೀತಂಗೌಡ ಈ ಹೇಳಿಕೆಗಳನ್ನು ಹೊಸದಾಗಿ ಕೊಡುತ್ತಿಲ್ಲ. ಹಿಂದೆಯೂ ಕೊಟ್ಟಿದ್ದಾರೆ, ಈಗಲೂ ಕೊಡುತ್ತಿದ್ದಾರೆ, ಮುಂದೆಯೂ ಹೇಳಿಕೆ ಕೊಡ್ತುತಾರೆ. ಅದರ ಬಗ್ಗೆ ನಾವ್ಯಾರು ಪ್ರತಿಕ್ರಿಯೆ ಕೊಡದೆ ಇರುವುದು ಉತ್ತಮ. ನಮ್ಮ ಪಕ್ಷ ಹಾಗೂ ಬಿಜೆಪಿ ಕಾರ್ಯಕರ್ತರು ಸಮನ್ವಯತೆಯಿಂದ ಹೋಗುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲೂ ಕೆಲವರು ಇದ್ದಾರೆ. ಈ ಪವಿತ್ರವಾದ ಮೈತ್ರಿಗೆ ತೊಂದರೆ ಕೊಡಬೇಕು ಎನ್ನುವ ದುರುದ್ದೇಶ ಇದೆ. ಇದರಲ್ಲಿ ಅವರು ಸಫಲ ಆಗಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ನಮ್ಮ ವರಿಷ್ಠರು, ಶಾಸಕರು, ಜಿಲ್ಲೆಯ ಮುಖಂಡರ ಅಭಿಪ್ರಾಯ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದರು.