ಹಾಸನ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಾ.ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕೆ.ಎಸ್.ಲತಾಕುಮಾರಿ, ಪಟೇಲ್ ಶಿವಪ್ಪ, ಎಚ್.ಎಲ್.ಮಲ್ಲೇಶ್‌ಗೌಡ, ಬಾಳ್ಳು ಗೋಪಾಲ್ ಇತರರಿದ್ದರು. 
ಹಾಸನ

ಡಾ.ರಾಜಕುಮಾರ್ ಕನ್ನಡದ ಆಸ್ತಿ

ಪ್ರಮುಖ ಮುಖ್ಯಾಂಶಗಳು

  • ಡಾ.ರಾಜಕುಮಾರ್ ಕನ್ನಡದ ಆಸ್ತಿ
  • ಡಿಸಿ ಅಭಿಪ್ರಾಯ ಜನ್ಮ ದಿನಾಚರಣೆ
ಹಾಸನ: ಕನ್ನಡ ಚಲನಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ, ವರನಟ ಎಂದೇ ಪ್ರಸಿದ್ಧರಾದ ಡಾ.ರಾಜಕುಮಾರ್ ಕನ್ನಡದ ಆಸ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು (ಸ್ವಾಯತ್ತ) ಸಹಯೋಗದಲ್ಲಿ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಡಾ.ರಾಜಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಸಂಸ್ಕೃತಿ, ಕಲೆಗೆ ರಾಜ್‌ಕುಮಾರ್ ಅವರ ಕೊಡುಗೆ ಅಪಾರವಾಗಿದೆ. ರಾಜ್‌ಕುಮಾರ್ ಅವರ ಭಾಷೆಯ ಬಳಕೆಯಲ್ಲಿ ಸ್ಪಷ್ಟತೆ, ನಿಖರತೆ, ಅಭಿವ್ಯಕ್ತಿ, ಭಾವನೆಗಳನ್ನು ಗಮನಿಸಿದ ಅವರ ಮೇರು ವ್ಯಕ್ತಿತ್ವವನ್ನು ತೋರಿಸುತ್ತದೆ. ನಮ್ಮ ನಾಡಿನಲ್ಲಿ ಜನಿಸಿದ ಅವರು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ತಿಳಿಸಿದರು.
ಅವರು ನಟಿಸಿರುವ ಸಿನಿಮಾಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದು, ಅವರ ಸಿನಿಮಾಗಳನ್ನು ವೀಕ್ಷಿಸುವುದರಿಂದ ಅನೇಕ ಜನರು ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಂಡುಕೊಳ್ಳಲು ಪ್ರೇರಣೆಯಾಗಿವೆ ಎಂದು ಹೇಳಿದರು.
ರಾಜಕುಮಾರ್ ಅವರು ನಟನೆಯಷ್ಟೇ ಅಲ್ಲದೆ, ಅವರು ಉತ್ತಮ ಗಾಯಕರಾಗಿದ್ದರು. ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸಿದ ಮಹಾನಟ ಡಾ.ರಾಜಕುಮಾರ್ ಅವರ ಒಂದು ಒಂದು ಚಲನಚಿತ್ರಗಳು ಜೀವನದ ಪಾಠವನ್ನು ತಿಳಿಸುತ್ತವೆ ಎಂದು ತಿಳಿಸಿದರು.
ಸರಳತೆ, ಸೌಜನ್ಯ ಮತ್ತು ಶಿಸ್ತಿನ ಮೂರ್ತ ರೂಪವಾಗಿದ್ದ ರಾಜಕುಮಾರ್ ಅವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಮಹಾ ಕಲಾವಿದರಾಗುವುದು ಅವರ ಕಲೆಗಳ ಮೂಲಕ. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಒಳಗಾಗುವ ಪಾತ್ರಗಳಲ್ಲಿ ಅಭಿನಯಿಸದೇ ಯುವಜನತೆ ಹಾಗೂ ಅಭಿಮಾನಿಗಳಿಗೆ ಮಾದರಿಯಾಗಿದ್ದರು ಎಂದರು.
ಜೀವನವನ್ನು ಹೇಗೆ ಹೋರಾಟವಾಗಿ ನಡೆಸಬೇಕು ಎಂಬುದನ್ನು ಅವರು ತಮ್ಮ ಚಲನಚಿತ್ರಗಳ ಮೂಲಕ ಅಭಿಮಾನಿಗಳ ಜೀವನಕ್ಕೆ ದಾರಿದೀಪ ಆಗಿದ್ದರು. ರಾಜಕುಮಾರ್ ಅವರ ಜೀವನವು ಶಿಸ್ತು ಮತ್ತು ಮನುಷ್ಯತ್ವದ ಪಾಠವನ್ನು ನಮಗೆ ಕಲಿಸುತ್ತದೆ. ಅವರ ಆದರ್ಶಗಳನ್ನು ಪಾಲಿಸುವುದು ನಾವೆಲ್ಲರೂ ಅವರಿಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಸಾಧನೆ ಮಾಡಲು ಬಡವರು, ಶ್ರೀಮಂತರು, ಜಾತಿ, ಧರ್ಮ ಯಾವುದು ಬೇಕಿಲ್ಲ. ಛಲವಿದ್ದರೆ ಗುರಿಯನ್ನು ತಲುಪಲು ಸಾಧ್ಯ. ಅದಕ್ಕೆ ಮಾದರಿ ರಾಜಕುಮಾರ್ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಲ್.ಮಲ್ಲೇಶ್‌ಗೌಡ ಮಾತನಾಡಿ, ರಾಜ್ ಕುಮಾರ್ ಅವರು ವಿದ್ಯೆಯಿಂದ ಡಾಕ್ಟರೇಟ್ ಪದವಿ ಪಡೆದವರಲ್ಲ. ವಿನಯದಿಂದ ಡಾಕ್ಟರೇಟ್ ಪಡೆದವರು. ರಾಜಕುಮಾರ್ ಅವರಿಗೆ ದೊರಕಿರುವ ಪ್ರಶಸ್ತಿಗಳನ್ನು ಗಮನಿಸಿದರೆ ಅವರು ಎಂತಹ ಮಹಾನ್ ಕಲಾವಿದರು ಎಂಬುದನ್ನು ತಿಳಿಯುತ್ತದೆ. ಜಗತ್ತಿನ ಶ್ರೇಷ್ಠ ನಟರಲ್ಲಿ ಶ್ರೇಷ್ಠರಾದವರು ರಾಜಕುಮಾರ್ ಅವರು ಎಂದರು.
ರಾಜಕುಮಾರ್ ನಟಿಸಿರುವ ಸಿನಿಮಾಗಳಲ್ಲಿ ಬಳಸಿರುವಂತಹ ಶಬ್ದಗಳ ಉಚ್ಚಾರಣೆ ಯಾವುದೇ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕದಿಂದಲೂ ಬಳಸಲು ಅಸಾಧ್ಯ. ಪೌರಾಣಿಕ, ಸಾಮಾಜಿಕ, ಚಾರಿತ್ರಿಕ ಮಾತ್ರವಲ್ಲದೆ ನವರಸಗಳನ್ನು ಮೀರಿಸುವಂತಹ ನಟನೆಯನ್ನು ಮಾಡುವಂತಹ ಪ್ರತಿಭೆ ಅವರಲ್ಲಿತ್ತು. ಎಷ್ಟೇ ಎತ್ತರಕ್ಕೆ ಬೆಳೆದರೂ ಅವರು ಎಂದಿಗೂ ಸರಳತೆಯನ್ನು ಬಿಡಲಿಲ್ಲ, ಅವರ ಉಡುಗೆ-ತೊಡುಗೆ ಮತ್ತು ನಡೆ-ನುಡಿ ಎಲ್ಲರಿಗೂ ಮಾದರಿಯಾಗಿವೆ ಎಂದರು.
ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿ, ರಾಜಕುಮಾರ್ ಅವರು ವಿದ್ಯಾಭ್ಯಾಸಕ್ಕೆ, ಆಶ್ರಮಗಳಿಗೆ ಹಾಗೂ ವೃದ್ಧಾಶ್ರಮಗಳಿಗೆ ಸಹಾಯ ಮಾಡುತ್ತಿದ್ದರು ಹಾಗೂ ಕನ್ನಡ ಭಾಷೆಗೆ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ನೆಲ, ಜಲ, ಭಾಷೆಗೆ ಯಾವುದೇ ರೀತಿ ಧಕ್ಕೆ ಬಂದರೂ ಹೋರಾಟಕ್ಕೆ ಅವರು ಮುನ್ನೆಲೆಯಲ್ಲಿ ಇರುತ್ತಿದ್ದರು, ಅವರು ನಟ ಮಾತ್ರ ಅಲ್ಲದೆ ಆದರ್ಶ ವ್ಯಕ್ತಿಯಾಗಿದ್ದರು. ಅವರು ದುಡ್ಡಿಗಾಗಿ ಎಂದು ಸಹ ಕೆಲಸ ಮಾಡಿಲ್ಲ, ಸಮಾಜದ ಒಳಿತಿಗಾಗಿ ಸೇವೆಯನ್ನು ಮಾಡುತ್ತಿದ್ದರು ಎಂದು ಹೇಳಿದರು.
ಗಾಯಕರಾದ ವಿಜಯ್ ಕುಮಾರ್ ಹಾಗೂ ಚೈತ್ರಾ ಅವರು ರಾಜಕುಮಾರ್ ಅವರ ಅಭಿನಯದ ಚಲನಚಿತ್ರ ಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುವುದರ ಜತೆಗೆ ಅಭಿನಯಿಸುವ ಮೂಲಕ ಮನರಂಜಿಸಿದರು.
ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಪ್ರಾಂಶುಪಾಲ ಡಿ.ಎಸ್.ರಾಜು, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಬಿ.ಟಿ. ಮಾನವ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮೀನಾಕ್ಷಮ್ಮ, ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಕನ್ನಡ ಉಪನ್ಯಾಸಕರಾದ ದೇವರಾಜು, ಬನುಮಾ ಗುರುದತ್, ಪ್ರಮೀಳಾ ಇತರರಿದ್ದರು.