ಚನ್ನರಾಯಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಹಾಗೂ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಜಿ.ಎಸ್.ಶಂಕರಪ್ಪ, ಸಿ.ಎನ್.ಮೋಹನ್, ಆರ್.ಯತೀಶ್ ಕುಮಾರ್ ಇದ್ದರು. 
ಹಾಸನ

ಡಾ.ಬಾಬೂಜಿ, ಅಂಬೇಡ್ಕರ್ ಜಯಂತಿಗೆ ನಿರ್ಧಾರ

ಚನ್ನರಾಯಪಟ್ಟಣ: ತಾಲೂಕು ಆಡಳಿತದ ವತಿಯಿಂದ ಏ.5ರಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಹಾಗೂ ಏ.14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಾಬು ಜಗಜೀವನರಾಮ್ ಅವರ ಹಸಿರು ಕ್ರಾಂತಿಯಿಂದ ದೇಶದಲ್ಲಿ ಆಹಾರದ ಕೊರತೆ ದೂರವಾಯಿತು. ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ದೇಶದ 140 ಕೋಟಿ ಜನರು ನೆಮ್ಮದಿಯಿಂದ ಬದುಕಲು ಕಾರಣ. ಇಂತಹ ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದಾಗ ಮಾತ್ರ ಮಹಾತ್ಮರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಏ.5ರಂದು ಡಾ.ಬಾಬು ಜಗಜೀವನರಾಂ ಜಯಂತ್ಯುತ್ಸವವನ್ನು ಮಿನಿವಿಧಾನಸೌಧ ಆವರಣದಲ್ಲಿ ಆಚರಿಸಲಾಗುವುದು. ಕಾರ್ಯಕ್ರಮ ಅಂಗವಾಗಿ ಡಾ.ಬಾಬು ಜಗಜೀವನರಾಂ ಅವರ ಜೀವನ ಚರಿತ್ರೆ ಹಾಗೂ ಸಾಧನೆ ಕುರಿತು ಉಪನ್ಯಾಸ ನೀಡಲಾಗುವುದು. ಏ.14ರಂದು ಅಂಬೇಡ್ಕರ್ ಜಯಂತಿ ಅಂಗವಾಗಿ ವಿವಿಧ ಕಲಾ ತಂಡಗಳೊಂದಿಗೆ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಪಟ್ಟಣದ ಕೃಷಿ ಇಲಾಖೆ ಮುಂಭಾಗ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಸಮಾಜದ ಎಳಿಗೆಗಾಗಿ ಶ್ರಮಿಸಿದ ಸಾಧಕರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.
ಜಯಂತಿ ಕಾರ್ಯಕ್ರಮದಲ್ಲಿ ಸ್ವಚ್ಛತೆ, ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ, ವೇದಿಕೆ ಅಲಂಕಾರ, ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಣ ಸೇರಿದಂತೆ ಅಗತ್ಯ ಸಿದ್ಧತೆ, ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಕಡ್ಡಾಯವಾಗಿ ಪೂಜೆ ಸಲ್ಲಿಸುವಂತೆ ಹಾಗೂ ತಾಲೂಕು ಮಟ್ಟದ ಸರ್ಕಾರಿ ನೌಕರರು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಇಒಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ಪುರಸಭಾ ಮಾಜಿ ಅಧ್ಯಕ್ಷ ಸಿ.ಎನ್. ಮೋಹನ್, ಮುಖ್ಯಾಧಿಕಾರಿ ಆರ್.ಯತೀಶ್‌ಕುಮಾರ್, ತಾಪಂ ಇಒ ಜಿ.ಆರ್.ಹರೀಶ್, ಪೊಲೀಸ್ ಉಪ ಅಧೀಕ್ಷಕ ಎನ್.ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಆರ್.ತ್ಯಾಗರಾಜು, ದಲಿತ ಮುಖಂಡರಾದ ಬೆಳಗಿಹಳ್ಳಿ ಪುಟ್ಟಸ್ವಾಮಿ, ದಂಡೋರ ಮಂಜುನಾಥ್, ಆಲದಹಳ್ಳಿ ವೆಂಕಟೇಶ್, ಪ್ರಕಾಶ್, ಪರುಶುರಾಮ್, ಈಶ್ವರನ್, ಧರ್ಮಯ್ಯ, ರಂಗಪ್ಪ, ಸತೀಶ್ ಇದ್ದರು.