ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಬೇಲೂರು ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಗಣ್ಯರು ಸನ್ಮಾನಿಸಿದರು.  
ಹಾಸನ

ಆಧುನಿಕ ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆ ಮರೆಯದಿರಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಂಭುನಾಥ ಸ್ವಾಮೀಜಿ ಕಿವಿಮಾತು
  • ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ

ಬೇಲೂರು:

ಮನುಷ್ಯನು ಎಷ್ಟೇ ಆಧುನಿಕ ಜೀವನ ನಡೆಸಿದರೂ ಆಧ್ಯಾತ್ಮಿಕ ಚಿಂತನೆ ಮತ್ತು ಭಗವಂತನ ಸ್ಮರಣೆಯನ್ನು ಮರೆಯಬಾರದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ-ಕೊಡಗು ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲೂಕು ಒಕ್ಕಲಿಗರ ಮಹಿಳಾ ಸಂಘದಿಂದ ಶನಿವಾರ ಆಯೋಜಿಸಿದ್ದ ಐದನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು.
ಜೀವನದಲ್ಲಿ ಭಗವಂತನ ಸ್ಮರಣೆ, ಪ್ರಾರ್ಥನೆ ಮತ್ತು ಭಕ್ತಿ ಅಗತ್ಯವಾಗಿದ್ದು, ನಿತ್ಯವೂ ಭಗವಂತನ ನಾಮಸ್ಮರಣೆಯಲ್ಲಿ ತೊಡಗಿದರೆ ಮನಸ್ಸಿಗೆ ನೆಮ್ಮದಿ, ಜೀವನದಲ್ಲಿ ಸಾರ್ಥಕತೆ ದೊರೆಯುತ್ತದೆ. ಶ್ರೀ ಸತ್ಯನಾರಾಯಣಸ್ವಾಮಿ ವ್ರತದ ಐದು ಅಧ್ಯಾಯಗಳು ಭಕ್ತಿ, ಸತ್ಯನಿಷ್ಠೆ, ದೇವರ ಮೇಲಿನ ನಂಬಿಕೆ ಹಾಗೂ ಹರಕೆಯನ್ನು ಮರೆಯದೆ ನೆರವೇರಿಸುವ ಮಹತ್ವವನ್ನು ತಿಳಿಸಲಾಗಿದೆ. ಸಂಪತ್ತು ಮತ್ತು ಯಶಸ್ಸು ದೊರೆತ ಸಂದರ್ಭದಲ್ಲಿ ಅಹಂಕಾರಕ್ಕೆ ಒಳಗಾಗದೆ, ದೇವರ ಕೃಪೆಯನ್ನು ಸದಾ ಸ್ಮರಿಸಬೇಕು ಎಂದರು.
ತಾಲೂಕು ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ವೈ.ಆರ್.ಭಾರತಿಗೌಡ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಆಯೋಜಿಸಲಾಗಿದ್ದು, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ಐದನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮದ ಅಂಗವಾಗಿ ಶನಿವಾರ ಬೆಳಗ್ಗೆಯಿಂದಲೇ ಗಣಪತಿ ಪೂಜೆ, ವೇದ ಮಂತ್ರಗಳ ಪಠಣ, ಸಂಕಲ್ಪ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ನೂರಾರು ಭಕ್ತರು ಸಾಮೂಹಿಕವಾಗಿ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡರು.
ಶಾಸಕ ಎಚ್.ಕೆ.ಸುರೇಶ್, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ದಿನೇಶ್, ತಾಲೂಕು ಒಕ್ಕಲಿಗರ ಮಹಿಳಾ ಸಂಘದ ಪದಾಧಿಕಾರಿಗಳು, ಶ್ರೀಮಠದ ಸದ್ಭಕ್ತರು, ಹಿರಿಯ ಮುಖಂಡರು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.