ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆ ನಂತರ ಸಂಗ್ರಹವಾದ ಹಣದೊಂದಿಗೆ ದೇಗುಲದ ಇಯ ಯೋಗೇಶ್ ಮತ್ತಿತರರು  
ಹಾಸನ

ಚನ್ನಕೇಶವನಿಗೆ 26.21 ಲಕ್ಷ ರೂ. ಕಾಣಿಕೆ

ಪ್ರಮುಖ ಮುಖ್ಯಾಂಶಗಳು

  • ಚನ್ನಕೇಶವನಿಗೆ 26.21 ಲಕ್ಷ ರೂ. ಕಾಣಿಕೆ
ಬೇಲೂರು : ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆ ನಡೆದಿದ್ದು, ಮೂರು ತಿಂಗಳಲ್ಲೆ ಒಟ್ಟು 26,21, 620 ರೂ. ಕಾಣಿಗೆ ಹಣ ಸಂಗ್ರಹವಾಗಿದೆ.
ದೇವಾಲಯದ ಇಒ ಯೋಗೇಶ್ ಮಾತನಾಡಿ, ದೇವಾಲಯದ ಹುಂಡಿ ಹಣ ಎಣಿಕೆಯಲ್ಲಿ ದೇವಾಲಯದ ಸಿಬ್ಬಂದಿ, ಬ್ಯಾಂಕ್ ನೌಕರರು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಹುಂಡಿ ತೆರೆಯಲಾಯಿತು. ನಂತರ ಸ್ಥಳೀಯ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಸರ್ವೋದಯ ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ನಗದು ಹಣವನ್ನು ಕ್ರಮ ಬದ್ಧವಾಗಿ ಎಣಿಕೆ ಮಾಡಿದರು.
ಈ ಸಂದರ್ಭ ಹುಂಡಿಯಲ್ಲಿ 26 ಲಕ್ಷದ 21 ಸಾವಿರದ 620 ರೂ, ಸಂಗ್ರಹವಾಗಿದ್ದು, ಇದು ದೇವಸ್ಥಾನ ಹಾಗೂ ದಾಸೋಹದಿಂದ ಹುಂಡಿಗಳಲ್ಲಿದ್ದ ಹಣವಾಗಿದೆ. ಮೂರು ತಿಂಗಳ ಅವಧಿಯಲ್ಲಿ ಈ ಮೊತ್ತ ಸಂಗ್ರಹವಾಗಿದ್ದು, ಇದಲ್ಲದೆ ಬೆಳ್ಳಿಯ ಚಿಕ್ಕ ತೊಟ್ಟಿಲು, ಕಣ್ಣು ಹಾಗೂ ಅಮೆರಿಕ ಮತ್ತು ಯುರೋಪ್ ದೇಶಗಳ ಡಾಲರ್‌ಗಳೂ ದೊರೆತಿವೆ. ಹುಂಡಿಯ ಹಣ ಏಣಿಕೆ ಕಾರ್ಯವು ಪಾರದರ್ಶಕತೆಯಿಂದ ನಡೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಭದ್ರತಾ ವ್ಯವಸ್ಥೆಯೊಂದಿಗೆ ಲೆಕ್ಕ ಪತ್ರಗಳನ್ನು ದಾಖಲಿಸಿ ಬ್ಯಾಂಕ್‌ಗೆ ಜಮಾ ಮಾಡುವ ಪ್ರಕ್ರಿಯೆ ನಡೆಸಿದ್ದೇವೆ. ಸಂಗ್ರಹವಾದ ಹಣವನ್ನು ದೇವಾಲಯದ ಅಭಿವೃದ್ಧಿ ಕಾರ್ಯ, ನಿತ್ಯ ಪೂಜೆ, ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೇವಾಲಯದಲ್ಲಿ ನಡೆಯುತ್ತಿರುವ ವಿಶೇಷ ಪೂಜೆ ಹಾಗೂ ಉತ್ಸವಗಳ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಹುಂಡಿ ಸಂಗ್ರಹದಲ್ಲಿಯೂ ಏರಿಕೆ ಕಂಡುಬಂದಿದೆ ಎಂದರು.
ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ದೇಗುಲದ ಸಿಬ್ಬಂದಿ ತಿಮ್ಮೇಗೌಡ, ಸುದೀಂದ್ರ, ಮಂಜುನಾಥ್, ಸಂತೋಷ್, ಸೇರಿದಂತೆ ಕಂದಾಯ, ಪೊಲೀಸ್ ಇದ್ದರು.