ಹಾಸನ ನಗರದ ಅರಸೀಕೆರೆ ರಸ್ತೆಯ ಎಸ್‌ಬಿಎಂ ಕಾಲನಿಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ದಂತ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ರವಿನಾಕಲಗೂಡು, ಚೇತನ್ ಗುರೂಜಿ, ಎಚ್.ಡಿ. ವಜ್ರಕುಮಾರ್, ಯೋಗೇಶ್ ಇತರರಿದ್ದರು.
- ಮತ್ತೊಬ್ಬರ ಜೀವ ಉಳಿಸಲು ರಕ್ತದಾನ ಸಹಕಾರಿ
- ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಕಿವಿಮಾತು
- ಆರೋಗ್ಯ ತಪಾಸಣಾ ಶಿಬಿರ
ಹಾಸನ: ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು, ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಯುವ ಜತೆಗೆ ದಾನಿಯ ಆರೋಗ್ಯಕ್ಕೂ ಸಹಕಾರಿ ಎಂದು ಹಿರಿಯ ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಹೇಳಿದರು.
ನಗರದ ಅರಸೀಕೆರೆ ರಸ್ತೆಯ ಎಸ್‌ಬಿಎಂ ಕಾಲನಿಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಯೋಗ ಚೇತನ ಕೇಂದ್ರ ಅಡಗೂರು, ರೋಟರಿ ಕ್ಲಬ್ ಆಫ್ ಹಾಸನ ಸನ್‌ರೈಸ್, ವರಸಿದ್ಧಿ ವಿನಾಯಕ ಯೋಗ ಕೇಂದ್ರ ಹಾಗೂ ಹಾಸನ ರಕ್ತನಿಧಿ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಹಾಗೂ ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಕ್ತದಾನ ಶಿಬಿರಗಳು ಹೆಚ್ಚಾಗಿರುವುದು ಸಂತಸದ ಸಂಗತಿ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ರಕ್ತದಾನ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಜನರಲ್ಲಿ ರಕ್ತದಾನದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕಿದೆ ಎಂದು ಹೇಳಿದರು.
ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಪ್ರಪಂಚ ಎಷ್ಟೇ ಮುಂದುವರಿದಿದ್ದರೂ ರಕ್ತದಾನ ಮಾಡಿದರೆ ಆರೋಗ್ಯಕ್ಕೆ ಅಪಾಯ ಎಂಬ ತಪ್ಪುಕಲ್ಪನೆ ಕೆಲವರಲ್ಲಿ ಇನ್ನೂ ಇದೆ. ಆರೋಗ್ಯವಂತ ವ್ಯಕ್ತಿಯೊಬ್ಬರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಬದಲಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಎಂದು ತಿಳಿಸಿದರು.
ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣಪತ್ರ ವಿತರಿಸಿ ಗೌರವಿಸಲಾಯಿತು. ಶಿಬಿರದಲ್ಲಿ ಒಟ್ಟು 20 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಅನೇಕ ಯುವಕರು ಮತ್ತು ಯೋಗ ಶಿಬಿರಾರ್ಥಿಗಳು ಉತ್ಸಾಹದಿಂದ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಚೇತನ್ ಗುರೂಜಿ, ರೋಟರಿ ಕ್ಲಬ್ ಆಫ್ ಹಾಸನ ಸನ್‌ರೈಸ್ ಅಧ್ಯಕ್ಷ ಎಚ್.ಡಿ.ವಜ್ರಕುಮಾರ್, ರೋಟರಿ ಸದಸ್ಯ ಹಾಗೂ ಕಾರ್ಯದರ್ಶಿ ಯೋಗೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಸ್ತುವಾರಿ ರಘು ಪಾಳ್ಯ, ಯೋಗ ಶಿಬಿರಾರ್ಥಿ ಅಜಿತ್ ಇತರರಿದ್ದರು.