ಅರಕಲಗೂಡು ತಾಲೂಕು ಹೆಣ್ಣೂರು ಕೊಂಗಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವಿಧ ಶೈಕ್ಷಣಿಕ ಪರಿಕರಗಳನ್ನು ಕೊಡುಗೆ ನೀಡಿದ ಯುಎಸ್‌ಟಿ ಗ್ಲೋಬಲ್ ಕಂಪನಿಯ ಚೈತ್ರಾ, ಹಳೆಯ ವಿದ್ಯಾರ್ಥಿ ಆದಿತ್ಯ, ಶೋಭಿತಾ, ಮಧುಮಿತಾ, ವೆಂಕಟ್ ಅವರನ್ನು ಸನ್ಮಾನಿಸಲಾಯಿತು. ದೇವರಾಜು, ರಂಗೇಗೌಡ, ತ್ರಿನೇತ್ರ ಇತರರಿದ್ದರು.
ಅರಕಲಗೂಡು: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸುವುದು ಪುಣ್ಯದ ಕಾಯಕವಾಗಿದೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ದೇವರಾಜು ಹೇಳಿದರು.
ತಾಲೂಕಿನ ಹೆಣ್ಣೂರು ಕೊಂಗಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿವಿಧ ಶೈಕ್ಷಣಿಕ ಪರಿಕರಗಳನ್ನು ಯುಎಸ್‌ಟಿ ಗ್ಲೋಬಲ್ ಕಂಪನಿ ಕೊಡುಗೆಯಾಗಿ ನೀಡಿದ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುಎಸ್‌ಟಿ ಗ್ಲೋಬಲ್ ಕಂಪನಿಯವರು ಶಾಲೆಗೆ ಕಂಪ್ಯೂಟರ್, ಪ್ರೊಜೆಕ್ಟರ್, ಪ್ರೊಜೆಕ್ಟರ್ ಪರದೆ, ಬೀರುಗಳು, 3 ಕಚೇರಿ ಮೇಜುಗಳು, 4 ಹಸಿರು ಫಲಕಗಳು (ಗ್ರೀನ್ ಬೋರ್ಡ್), 10 ಕಚೇರಿ ಕುರ್ಚಿಗಳು ಹಾಗೂ 10 ವಿದ್ಯಾರ್ಥಿ ಮೇಜುಗಳು ಸೇರಿದಂತೆ ಅಗತ್ಯವಾದ ಬೋಧನಾ ಅಧ್ಯಯನ ಉಪಕರಣಗಳನ್ನು ಉಚಿತವಾಗಿ ಕೊಡುಗೆ ನೀಡಿದೆ. ಇದರಿಂದ ಶಾಲೆಯ ಇ-ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಹಾಗೂ ಶಿಕ್ಷಣ ಗುಣಮಟ್ಟ ಹೆಚ್ಚಾಗಲಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಸರ್ಕಾರಿ ಶಾಲೆಗಳಿಗೆ ಸಹಕಾರ ನೀಡುತ್ತಿರುವ ಯುಎಸ್‌ಟಿ ಗ್ಲೋಬಲ್ ಸಂಸ್ಥೆಯ ಸೇವೆ ಶ್ಲಾಘಿಸಿಯ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಎಚ್.ಡಿ.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ರಂಗೇಗೌಡ, ಶಾಲೆಯ ಮುಖ್ಯ ಶಿಕ್ಷಕಿ ತ್ರಿನೇತ್ರ ಯತೀಶ್, ಮಲ್ಲಪ್ಪನಹಳ್ಳಿ ಶಾಲೆ ಮುಖ್ಯ ಶಿಕ್ಷಕ ತೀರ್ಥಕುಮಾರ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಗ್ರಾಮಸ್ಥರು ಇದ್ದರು. ಯುಎಸ್‌ಟಿ ಗ್ಲೋಬಲ್ ಸಂಸ್ಥೆಯ ಪ್ರತಿನಿಧಿಗಳಾದ ಚೈತ್ರಾ, ಹಳೆಯ ವಿದ್ಯಾರ್ಥಿ ಆದಿತ್ಯ, ಶೋಭಿತಾ, ಮಧುಮಿತಾ, ವೆಂಕಟ್ ಅವರನ್ನು ಸನ್ಮಾನಿಸಲಾಯಿತು.