ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಡೇರಿಗೆ ಹಾಲು ಹಾಕುವ ಮೂಲಕ ಶಾಸಕ ಎ.ಮಂಜು ಚಾಲನೆ ನೀಡಿದರು. ಸತೀಶ್, ಗ್ರಾಮಸ್ಥರು ಇದ್ದರು. 
ಹಾಸನ

ಖಾಸಗಿ ಡೇರಿಗಳ ಅವಲಂಬಿಸದೆ ಕೆಎಂಎಫ್‌ಗೆ ಹಾಲು ಹಾಕಿ

ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟನಾ ಸಮಾರಂಭ ಬುಧುವಾರ ಜರುಗಿತು.
ಡೇರಿಗೆ ಹಾಲು ಹಾಕುವ ಮೂಲಕ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎ.ಮಂಜು ಗ್ರಾಮೀಣ ಮಹಿಳೆಯರು ಖಾಸಗಿ ಡೇರಿಗಳಿಗೆ ಅವಲಂಬಿತರಾಗದೆ ಕೆಎಂಎಫ್ ಡೇರಿಗಳಿಗೆ ಹಾಲು ಪೂರೈಕೆ ಮಾಡುವ ಮೂಲಕ ಸರ್ಕಾರದ ಸಹಾಯಧನ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಹಾಲು ಉತ್ಪಾದನೆ ಗ್ರಾಮೀಣ ಕುಟುಂಬಗಳ ಆರ್ಥಿಕ ಬಲವರ್ಧನೆಗೆ ನೆರವಾಗುವ ಪ್ರಮುಖ ವೃತ್ತಿಯಾಗಿದ್ದು, ಮಹಿಳೆಯರು ಸಹಕಾರ ಸಂಘಗಳ ಮೂಲಕ ಸಂಘಟಿತರಾಗಿ ಕಾರ್ಯ ನಿರ್ವಹಿಸಿದರೆ ಇನ್ನಷ್ಟು ಪ್ರಗತಿ ಸಾಧಿಸಬಹುದು ಎಂದು ಹೇಳಿದರು.
ಜತೆಗೆ, ಹೈನುಗಾರಿಕೆಯಿಂದ ದೊರೆಯುವ ಆದಾಯವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಭವಿಷ್ಯ ರೂಪಿಸಬೇಕು. ಗ್ರಾಮದಲ್ಲಿ ಮಹಿಳಾ ಸಹಕಾರ ಸಂಘ ಆರಂಭವಾಗಿರುವುದು ಸಂತಸದ ಸಂಗತಿಯಾಗಿದೆ. ಸಂಘದ ಮೂಲಕ ಮಹಿಳೆಯರು ಆರ್ಥಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಲಿ ಎಂದರು.
ಹಾಸನ ಹಾಲು ಉತ್ಪಾದಕ ಮಂಡಳಿ ನಿರ್ದೇಶಕ ಸತೀಶ್, ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.