ತಾಲೂಕಿನ ವಿವಿಧ ಹೋಬಳಿ ಕೇಂದ್ರಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ನೇಮಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ಇದಕ್ಕೆ ಪೂರಕ ಎನ್ನುವಂತೆ ಗ್ರಾಮೀಣ ಭಾಗದಲ್ಲಿ ಸೂಕ್ತ ಚಿಕತ್ಸೆ ದೊರೆಯದ ಹಿನ್ನೆಲೆ, ಸಣ್ಣ ಪುಟ್ಟ ಕಾಯಿಲೆ ಗುಣಪಡಿಸಿಕೊಳ್ಳಲು ಖಾಸಗಿ ನರ್ಸಿಂಗ್ ಹೋಮ್‌ಗಳನ್ನು ಆಶ್ರಯಿಸುವಂತಾಗಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಬಡ ರೋಗಿಗಳ ಪಾಲಿಗೆ ಮರಣ ಶಾಸನವಾಗಿದ್ದು ಆಡಳಿತ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರ ಆಕ್ರೋಶ ಸ್ಫೋಟಗೊಂಡಿದೆ.
ಈಗಾಗಲೇ ಸರ್ಕಾರದಿಂದ ಮಂಜೂರಾಗಿರುವ 40 ಹುದ್ದೆಗಳ ಪೈಕಿ 14 ಖಾಲಿ ಉಳಿದಿದ್ದು ಸಮಸ್ಯೆಗೆ ಮೂಲ ಕಾರಣವಾಗಿದೆ. 10 ಗುತ್ತಿಗೆ ವೈದ್ಯರ ಸೇವೆ ಬಳಸಿಕೊಳ್ಳಲಾಗುತ್ತಿದ್ದರೂ ಸಿಬ್ಬಂದಿ ಸೇರಿ ಬಹುತೇಕ ಶೇ.60 ರಷ್ಟು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ.
ಇನ್ನು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 800ರಿಂದ 1000 ಜನರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಆದರೆ ಇದಕ್ಕೆ ವಿಪರ್ಯಾಸ ಎನ್ನುವಂತೆ ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಪರಿಸ್ಥಿತಿ ಅವಲೋಕಿಸಿದಲ್ಲಿ ಬಾಣಾವರ ಪಟ್ಟಣ ಪಂಚಾಯ್ತಿ ಹಾಗೂ ಹೋಬಳಿ ಕೇಂದ್ರದಲ್ಲಿ ವ್ಯಾಪ್ತಿಯಲ್ಲಿ ಮಾತ್ರವೇ 40 ಸಾವಿರ ನಾಗರಿಕರಿಗೆ ಕೇವಲ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಸಮಸ್ಯೆಯ ಗಂಭೀರತೆಯನ್ನು ತೆರೆದಿಟ್ಟಿದೆ.
ಜೆ.ಸಿ.ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ:
ಮೈಸೂರು ಅರಸರ ಕಾಲದಲ್ಲಿ ಆರಂಭಗೊಂಡಿದ್ದ 100 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಮೇಲ್ನೋಟಕ್ಕೆ ಹೈಟೆಕ್ ಎನಿಸಿದರೂ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಡಯಾಲಿಸಿಸ್ ಹೊರತುಪಡಿಸಿದರೆ ಎಂಆರ್‌ಐ, ಹೆರಿಗೆ , ಕೀಲು, ಮೂಳೆ ಶಸ್ತ್ರಚಿಕಿತ್ಸೆ ಸೇರಿದಮತೆ ಬಹುತೇಕ ಜಿಲ್ಲಾಸ್ಪತ್ರೆಗೆ ಕಳುಹಿಸುವ ಸನ್ನಿವೇಶ ನಿರ್ಮಾಣಗೊಂಡಿದೆ. ಗಂಡಸಿ ಹಾಗೂ ಜೆ.ಸಿ.ಪುರ ಗ್ರಾಮದಲ್ಲಿರುವ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ಕರಗುಂದ, ಉಂಡಿಗನಾಳು, ಹಂದ್ರಾಳು, ಹಾರನಹಳ್ಳಿ, ಬಾಗೇಶಪುರ, ಕಲ್ಯಾಡಿ, ಜಾವಗಲ್, ನೇರ‌್ಲಿಗೆ, ಕೋಳಗುಂದ, ಬಾಣಾವರ, ಆರ್.ಎನ್.ಕೊಪ್ಪಲು, ಕಲ್ಲುಸಾದರಹಳ್ಳಿ, ಹಿರಿಸಾದರಳ್ಳಿ, ಕಣಕಟ್ಟೆ, ಮಾಡಾಳು, ಡಿ.ಎಂ.ಕುರ್ಕೆ, ಶಶಿವಾಳ, ಕಾಮಸಮುದ್ರ, ಕೆಂಕೆರೆ, ಬಾಗಿವಾಳು, ಕೊಂಡೇನಾಳು, ತೊಳಲತೊರೆ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಬಹುತೇಕ ಕೇಂದ್ರಗಳು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಿಸುತ್ತಿವೆ.
ಇನ್ನು ಪ್ರಮುಖ ಐದು ಹೋಬಳಿ ಕೇಂದ್ರಗಳ ವ್ಯಾಪ್ತಿಯಲ್ಲಿನ ಆರೋಗ್ಯ ಉಪಕೇಂದ್ರಗಳ ಸ್ಥಿತಿಯೂ ಶೋಚನೀಯ. ಚಿಕ್ಕೂರು, ಮುದುಡಿ, ಪುರ‌್ಲೇಹಳ್ಳಿ,ಕುರುವಂಕ, ವೃಂದಾವನಹಳ್ಳಿ, ಬೆಳಗುಂಬ, ಅರಕೆರೆ, ಕಲ್ಗುಂಡಿ, ದೋಣನಕಟ್ಟೆ, ಕೆಂಗುರುಬರ ಹಟ್ಟಿ ಸೇರಿ 14 ಹಳ್ಳಿಗಳಲ್ಲಿ ಆಯುಷ್ ಚಿಕಿತ್ಸಾಲಯವಿದ್ದು ವೈದ್ಯರ ನೇಮಕವೂ ಸಮರ್ಪಕವಾಗಿಲ್ಲ.
ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗೆ ರಾಷ್ಟ್ರೀಯ ಉಚಿತ ಆರೋಗ್ಯ ತಪಾಸಣಾ ವ್ಯವಸ್ಥೆಯಡಿ ಗುರುತಿಸಲ್ಪಟ್ಟಿರುವ ಅಸಾಂಕ್ರಾಮಿಕ ತೊಂದರೆಗಳಾದ ಹೃದಯ ಬೇನೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಪಾರ್ಶ್ವವಾಯು, ಕ್ಯಾನ್ಸರ್ ತಪಾಸಣೆಗೂ ಹಿನ್ನಡೆ ಎದುರಾಗಿದೆ.
ಖಾಸಗಿ ರೇಡಿಯಾಲಜಿಸ್ಟ್‌ಗಳ ಹಾವಳಿ:
ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಯಡಿ ಪ್ರತಿ ತಿಂಗಳ 9ನೇ ದಿನಾಂಕದಂದು 3 ಹಾಗೂ 6 ತಿಂಗಳ ಗರ್ಭಿಣಿಯರಿಗೆ ಉಚಿತ ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಸೇರಿ ಎಲ್ಲ ಬಗೆಯ ಪರೀಕ್ಷೆ ನಡೆಸಬೇಕು. ಆದರೆ ಖಾಸಗಿ ರೇಡಿಯಾಲಜಿಸ್ಟ್‌ಗಳ ಹಾವಳಿ, ಸರ್ಕಾರದ ಉಚಿತ ಸೌಲಭ್ಯಕ್ಕೆ ಸವಾಲಾಗಿ ಪರಿಣಮಿಸಿದೆ.ಇನ್ನು ಜನನಿ ಶಿಶು ಸುರಕ್ಷಾ (ಜೆ.ಎಸ್.ಎಸ್.ಕೆ) ಯೋಜನೆಯಡಿ ಗರ್ಭಿಣಿಯರು ಹಾಗೂ ಒಂದು ವರ್ಷದೊಳಗಿನ ಮಗುವಿಗೆ ಎಲ್ಲ ಬಗೆಯ ತಪಾಸಣೆಗಳನ್ನು ಉಚಿತವಾಗಿ ನಡೆಸಿ ಆರೈಕೆ ಮಾಡಬೇಕು ಎನ್ನುವ ನಿಯಮವಿದೆ. ಆದರೆ ತಜ್ಞ ವೈದ್ಯರ ಕೊರತೆಯಿಂದಾಗಿ ಎಲ್ಲ ಬಗೆಯ ಸೌಕರ್ಯಗಳು ಜನರ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿವೆ.
ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವ ಕೆ.ಎಂ.ಶಿವಲಿಂಗಗೌಡ, ಆರೋಗ್ಯ ಸಚಿವ ಯು.ಟಿ.ಖಾದರ್, ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಭರ್ತಿ ಮಾಡುವ ಮೂಲಕ ಬಡ ರೋಗಿಗಳ ನೆರವಿಗೆ ಧಾವಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಎದುರಾಗಿರುವ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಮಾಹಿತಿಯನ್ನು ಉನ್ನತಾಧಿಕಾರಿಗಳಿಗೆ ನೀಡಲಾಗುವುದು. ನಗರ ಸೇರಿದಂತೆ ಹೋಬಳಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 14 ವೈದ್ಯರ ಕೊರತೆ ಎದುರಾಗಿದೆ. ಹಾಲಿ ಇರುವ ವೈದ್ಯರನ್ನೇ ಬಳಸಿಕೊಂಡು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸಮಸ್ಯೆಯ ಗಂಭೀರತೆಯನ್ನು ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ವಿಜಯವಾಣಿಗೆ ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.
* ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಪರಿಸ್ಥಿತಿ ಅವಲೋಕಿಸಿದಲ್ಲಿ ಬಾಣಾವರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾತ್ರವೇ 40 ಸಾವಿರ ನಾಗರಿಕರಿಗೆ ಕೇವಲ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ. ಆರೋಗ್ಯ ಕ್ಷೇತದ ಅಭಿವೃದ್ಧಿ ಹೇಗಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ದೊರೆಯುವುದಿಲ್ಲ. ಆರೋಗ್ಯ ಇಲಾಖೆ ಸಚಿವರು ಒಮ್ಮೆ ತಾಲೂಕಿಗೆ ಭೇಟಿ ನೀಡಿ ಪರಿಶೀಲಿಸಿದರೆ ಹೈಟೆಕ್ ಆಸ್ಪತ್ರೆ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಗೋಲ್ ಮಾಲ್ ಗೊತ್ತಾಗಲಿದೆ.
ವಿರೂಪಾಕ್ಷಪ್ಪ, ಬಿಜೆಪಿ ಮುಖಂಡ, ಬಾಣಾವರ.