ಮಾರನಹಳ್ಳಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಕಿ ತಡೆಗಟ್ಟುವಿಕೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. 
ಹಾಸನ

ಹಿಡುವಳಿ ಜಾಗಗಳಲ್ಲಿ ಬೆಂಕಿ ಹಾಕದಿರಿ

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಇಲಾಖೆ
  • ಅಗ್ನಿಶಾಮಕ ದಳ
  • ಮಾರನಹಳ್ಳಿ ಪ್ರೌಢಶಾಲಾ ಆವರಣ
ಸಕಲೇಶಪುರ: ಬೇಸಿಗೆಯಲ್ಲಿ ಸಂಭವಿಸಬಹುದಾದ ಹಾನಿ, ಅರಣ್ಯ ಬೆಂಕಿ ತಡೆಗಟ್ಟುವ ಕ್ರಮ ಹಾಗೂ ಬೆಂಕಿ ಕಾಣಿಸಿಕೊಂಡಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಹಯೋಗದಲ್ಲಿ ಅರಿವು ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕಿನ ಮಾರನಹಳ್ಳಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡಿದರು.
ಸಕಲೇಶಪುರ ಪ್ರಾದೇಶಿಕ ಅರಣ್ಯ ವಲಯದಲ್ಲಿ ಬೇಸಿಗೆ ಅವಧಿಯಲ್ಲಿ ಬೆಂಕಿ ಪ್ರಕರಣಗಳ ಸಂಭವನೀಯತೆ ಹೆಚ್ಚಿರಲಿದೆ. ಸಾರ್ವಜನಿಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಈ ಸಂಬಂಧ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಅರಣ್ಯ ಹಾಗೂ ಹಿಡುವಳಿ ಜಾಗಗಳಲ್ಲಿ ಬೆಂಕಿ ಹಾಕಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.
ಸಕಲೇಶಪುರ ವಲಯ ಅರಣ್ಯಾಧಿಕಾರಿ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಜನವರಿಯಿಂದ ಮೇ ತಿಂಗಳವರೆಗೆ ತಾಪಮಾನ ಹೆಚ್ಚಾಗುವ ಕಾರಣ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಹರಡುವ ಅಪಾಯ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಂಪತ್ತಿನ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಎಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕೆಂದು ತಿಳಿಸಲಾಯಿತು.