ಆಲೂರು ತಾಲೂಕಿನ ಭಕ್ತರವಳ್ಳಿ ಗ್ರಾಮದ ರೈತರು 2004ರಲ್ಲಿ ಯಗಚಿ (ಯಗಚಿ) ನಾಲೆ ನಿರ್ಮಾಣಕ್ಕಾಗಿ ಭೂಮಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರೂ ಪರಿಹಾರ ದೊರಕಿಲ್ಲ ಎಂಬ ಆರೋಪದ ಹಿನ್ನೆಲೆ ಕೋರ್ಟ್ ಆದೇಶದ ಮೇರೆಗೆ ಶುಕ್ರವಾರ ಜಿಲ್ಲಾಧಿಕಾರಿ ಸರ್ಕಾರಿ ಕಾರನ್ನು ವಕೀಲರು ವಶಕ್ಕೆ ಪಡೆದರು. ಘಟನೆ ನಡೆದು ನಂತರ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಪರಿಹಾರ ಕೊಡುವ ಭರವಸೆ ನೀಡಿದ ಪ್ರಸಂಗ ನಡೆಯಿತು. 
ಹಾಸನ

ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು ಜಪ್ತಿ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರು ಜಪ್ತಿ
  • ಸರ್ಕಾರ ವಶಕ್ಕೆ ಪಡೆದ ಭೂಮಿಗೆ ಪರಿಹಾರ ನೀಡದ ಹಿನ್ನೆಲೆ
ಹಾಸನ: ಆಲೂರು ತಾಲೂಕಿನ ಭಕ್ತರವಳ್ಳಿ ಗ್ರಾಮದ ರೈತರು 2004ರಲ್ಲಿ ಯಗಚಿ ನಾಲೆ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರೂ ಪರಿಹಾರ ದೊರಕಿಲ್ಲ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದ ಮೇರೆಗೆ ಶುಕ್ರವಾರ ಜಿಲ್ಲಾಧಿಕಾರಿ ಅವರ ಸರ್ಕಾರಿ ಕಾರನ್ನು ಜಪ್ತಿ ಮಾಡಲಾಗಿದೆ. ನಂತರ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ಪರಿಹಾರ ಕೊಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಕೀಲ ಮಂಜುನಾಥ್ ಮಾತನಾಡಿ, ಭಕ್ತರವಳ್ಳಿ ಗ್ರಾಮದ ಸರ್ವೆ ನಂ.44/1 ರಲ್ಲಿನ ಸುಮಾರು 10 ಎಕರೆ ಭೂಮಿಯನ್ನು ನಾಲೆ ನಿರ್ಮಾಣಕ್ಕಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದು, ನಾಗಮ್ಮ, ಲಕ್ಷ್ಮೀಗೌಡ ಹಾಗೂ ಜಗದೀಶ್ ಅವರ ಈ ಭೂಮಿಗೆ ಸುಮಾರು 11.22 ಲಕ್ಷ ರೂ. ಪರಿಹಾರ ನೀಡಬೇಕಾಗಿತ್ತು. ಆದರೆ, ಎರಡು ದಶಕಗಳಾದರೂ ಜಿಲ್ಲಾಡಳಿತ ಪರಿಹಾರ ನೀಡದೆ ರೈತರನ್ನು ಅಲೆದಾಡಿಸುತ್ತಿದೆ ಎಂದು ಆರೋಪಿಸಿದರು.
ಪರಿಹಾರಕ್ಕಾಗಿ ರೈತರು ಹಾಗೂ ಅವರ ಕುಟುಂಬಗಳು ಹಲವು ಬಾರಿ ಜಿಲ್ಲಾಡಳಿತದ ವಿವಿಧ ಕಚೇರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಬೇಸತ್ತ ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದಂತೆ ಜಿಲ್ಲಾಧಿಕಾರಿ ಕಾರನ್ನು ಜಪ್ತಿ ಮಾಡಲಾಗಿದೆ. ನಂತರ ಜಿಲ್ಲಾಧಿಕಾರಿ ಪರಿಹಾರ ಹಣ ಕೊಡುವ ಭರವಸೆ ನೀಡಿದರೂ ರೈತರು ಪರಿಹಾರ ಕೊಡುವವರೆಗೂ ಕಾರಿನ ಮುಂದೆಯೇ ಧರಣಿ ಕೂರುವುದಾಗಿ ಹೇಳಿದರು.