ಎಚ್.ಡಿ.ರೇವಣ್ಣ 
ಹಾಸನ

ಜಿಲ್ಲಾಧಿಕಾರಿಯಿಂದ ಶಾಸಕರಿಗೆ ಅಗೌರವ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಯಿಂದ ಶಾಸಕರಿಗೆ ಅಗೌರವ
  • ಶಾಸಕ ಎಚ್.ಡಿ.ರೇವಣ್ಣ ಆರೋಪ
ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಜಿಲ್ಲೆಗೆ ಬಂದು 10 ತಿಂಗಳ ಮೇಲಾಗಿದೆ. ಆದರೂ ಎರಡೂವರೆ ಸಾವಿರಕ್ಕೂ ಅಧಿಕ ಕಂದಾಯ ಇಲಾಖೆ ಕಡತಗಳು ಡಿಸಿ ಸಹಿಗಾಗಿ ಬಾಕಿ ಉಳಿದಿವೆ. ಗೋಮಾಳ ಜಾಗವನ್ನು ಬೇಕಾಬಿಟ್ಟಿ ಖಾತೆ ಮಾಡಿಕೊಡಲಾಗುತ್ತಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ದೂರಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳನ್ನು ವಿನಾಕಾರಣ ಕಾಯಿಸುವುದು, ಶಾಸಕರನ್ನು ಅಗೌರವಿಸುವುದೇ ಜಿಲ್ಲಾಧಿಕಾರಿ ಕೆಲಸವಾಗಿದೆ. ನಿರಂತರ ಸಭೆ ಮಾಡಿ ಅದೇನು ಮಾಡುತ್ತಾರೋ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿ, ಕ್ರಾಂತಿಕಾರಿ ಬದಲಾವಣೆ ಆಗಿದೆ ಎಂದಿದ್ದರು. ಎಲ್ಲಿ ಕ್ರಾಂತಿ ಆಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಈಗಿನ ಜಿಲ್ಲಾಧಿಕಾರಿ ಅಧಿಕಾರಿಗಳನ್ನು ಸುಮ್ಮನೆ ಅಲೆದಾಡಿಸುತ್ತಿದ್ದಾರೆ ಎಂದ ಆರೋಪಿಸಿದರು.
ಮಾಜಿ ಪ್ರಧಾನಿಗಳ ಜಿಲ್ಲೆಗೆ ಅನುಭವಿ ಅಧಿಕಾರಿಗಳನ್ನು ಹಾಕಬೇಕು. ನಾನು 30 ವರ್ಷಗಳಿಂದ ಶಾಸಕನಾಗಿದ್ದೇನೆ. ಇಂತಹ ಅಧಿಕಾರಿಗಳನ್ನು ನೋಡಿಲ್ಲ. ಯಾರ ಬಳಿ ಹೇಗೆ ನಡೆದುಕೊಳ್ಳಬೇಕೆಂಬ ಅರಿವು ಇಲ್ಲ. ಹೊಸಬರನ್ನು ಇಂತಹ ಜಿಲ್ಲೆಗಳಿಗೆ ಹಾಕಬಾರದು. ಕ್ಷೇತ್ರ ಅಭಿವೃದ್ಧಿ ಕುರಿತು ಚರ್ಚಿಸಲು ಹೋದರೆ ನಮ್ಮ ಎದುರೇ ಅಧಿಕಾರಿಗಳನ್ನು ಅವಮಾನಿಸುತ್ತಾರೆ. ಹೀಗಾಗಿ ನಾನು ಜಿಲ್ಲಾಧಿಕಾರಿ ಕಚೇರಿಗೆ ಹೋಗುವುದನ್ನೇ ಬಿಟ್ಟಿದ್ದೇನೆ ಎಂದರು.
ಜಿಲ್ಲಾಧಿಕಾರಿ ಕಚೇರಿಯ ಕಡತಗಳಿಗೆ ವರ್ಷಗಳ ವರೆಗೆ ಸಹಿ ಆಗುವುದಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ಜಿಲ್ಲೆಯ ನಾಲ್ಕು ಶಾಸಕರು ಸೇರಿ ಪ್ರತಿಭಟನೆ ನಡೆಸಬೇಕಾಗುತ್ತದೆ. ಕಂದಾಯ ಇಲಾಖೆಯ ಕೆಲಸಗಳಾಗದೆ ಭಾರೀ ತೊಂದರೆಯಾಗುತ್ತಿದೆ. ಮಂಜೂರಾದ ಜಮೀನು ಖಾತೆ, ದುರಸ್ತು ಮಾಡಿಕೊಡಲು ವಿನಾಕಾರಣ ಹಿಂದೇಟು ಹಾಕುತ್ತಿದ್ದಾರೆ. ಜಮೀನು ಖರೀದಿ ಅಥವಾ ಮಾರಾಟ ಮಾಡುವವರಿಗೆ ಸಮಸ್ಯೆಯಾಗುತ್ತಿದೆ ಎಂದರು.
ಮುಖ್ಯಮಂತ್ರಿ ಬರಬೇಕೇ?:
ರೈತರಿಗೆ ರಸಗೊಬ್ಬರ ಕೊಡಿಸಲು ಸಚಿವರು, ಮುಖ್ಯಮಂತ್ರಿ ಬರುವುದಾದರೆ ಜಿಲ್ಲಾಧಿಕಾರಿ ಏಕೆ ಇರಬೇಕು? ನಾನು ಮಂತ್ರಿಯಾಗಿದ್ದಾಗ ಆರು ತಿಂಗಳ ಮೊದಲೇ ರಸಗೊಬ್ಬರ ದಾಸ್ತಾನು ಇರಿಸುತ್ತಿದ್ದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದಲೇ ಶೇ. 80 ಗೊಬ್ಬರ ವಿತರಣೆಯಾಗಬೇಕು. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸುವುದಿಲ್ಲ. ಮಧ್ಯವರ್ತಿಗಳು ರೈತರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದರು.
ಪಕ್ಷದ ನಿಲುವಿಗೆ ಬದ್ಧ:
ಬಿಡದಿ ಟೌನ್‌ಶಿಪ್ ವಿರೋಧಿಸಿ ಜೂ.21ರಂದು ಪಕ್ಷದ ನಾಯಕರು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ನನ್ನನ್ನು ಆಹ್ವಾನಿಸಿದರೆ ಖಂಡಿತ ಭಾಗವಹಿಸುತ್ತೇನೆ. ಫಲವತ್ತಾದ ಭೂಮಿ ದುರುಪಯೋಗ ಆಗಬಾರದು ಎಂಬುದು ನಮ್ಮ ನಿಲುವು. ಈ ನಿಟ್ಟಿನಲ್ಲಿ ಸರ್ಕಾರ ಹಠ ಬಿಡಬೇಕು. ರಾಜ್ಯದಲ್ಲಿ ಮಾಡಬೇಕಾದ ಕೆಲಸ ಸಾಕಷ್ಟಿದೆ. ಮುಖ್ಯಮಂತ್ರಿ ಅವರು ಆ ಕಡೆಗೆ ಗಮನ ಹರಿಸಲಿ ಎಂದು ರೇವಣ್ಣ ಸಲಹೆ ನೀಡಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಆಸ್ತಿ ದಾಖಲೆ ಬಹಿರಂಗಪಡಿಸುವುದಾಗಿ ಮಾಜಿ ಸಚಿವರೊಬ್ಬರು ಹೇಳಿದ್ದಾರೆ. ನಮ್ಮ ಕುಟುಂಬದವರ ಎಲ್ಲರ ಆಸ್ತಿ ವಿವರ ಸರ್ಕಾರದ ಬಳಿ ಇದೆ. ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಸವಾಲೆಸೆದರು.