ಹೊಳೆನರಸೀಪುರ ತಾಲೂಕಿನ ಮಳಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಪೂಜೆ ಮಾಡುವ ವಿಚಾರಕ್ಕೆ ಅರ್ಚಕರ ಎರಡು ಬಣಗಳ ಜತೆಗೆ ತಹಸೀಲ್ದಾರ್ ಚಿರ್ಚಿಸಿದರು.  
ಹಾಸನ

ಅರ್ಚಕ ವೃತ್ತಿಗಾಗಿ ಜಗಳ ದೇಗುಲಕ್ಕೆ ಬೀಗ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಳಲಿ ಲಕ್ಷ್ಮೀದೇವಿ ದೇವಸ್ಥಾನದ ಘಟನೆ
  • ತಹಸೀಲ್ದಾರ್ ಮಧ್ಯ ಪ್ರವೇಶದಿಂದ ತಿಳಿಯಾದ ಪ್ರಕರಣ
ಹೊಳೆನರಸೀಪುರ: ತಾಲೂಕಿನ ಧಾರ್ಮಿಕ ದತ್ತಿ ಇಲಾಖೆಯ ಶ್ರೀ ಮಳಲಿ ಲಕ್ಷ್ಮೀದೇವಿ ದೇವಸ್ಥಾನದ ಅರ್ಚಕ ವೃತ್ತಿ ಸಂಬಂಧ ಎರಡು ಕುಟುಂಬಗಳು ಜಗಳವಾಡಿಕೊಂಡು ದೇವಸ್ಥಾನಕ್ಕೆ ಬೀಗ ಹಾಕಿ ಹೊರ ನಡೆದಿದ್ದು, ಈ ನಡೆಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳಲಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಶಕ್ತಿ ದೇವತೆ ಶ್ರೀ ಲಕ್ಷ್ಮೀದೇವಿ ಲಕ್ಷಾಂತರ ಭಕ್ತರ ಆರಾಧ್ಯ ದೈವ. ಈ ದೇವಸ್ಥಾನದ ಅರ್ಚಕ ವೃತ್ತಿಯನ್ನು ಅದೇ ಗ್ರಾಮದ ಯಾದವ ಜನಾಂಗದ 24 ಕುಟುಂಬದವರು ನಿರ್ವಹಿಸುತ್ತ ಬಂದಿದ್ದಾರೆ. ಆದರೆ, ಅರ್ಚಕ ವೃತ್ತಿ ಮಾಡುವ ಕುಟುಂಬಗಳ ಒಳ ಜಗಳವನ್ನು ತಾಲೂಕು ಆಡಳಿತ ಬಗೆಹರಿಸದೆ ಬೀದಿ ರಂಪಾಟಕ್ಕೆ ಅವಕಾಶ ಮಾಡಿರುವುದು ಭಕ್ತರಿಗೆ ನೋವುಂಟು ಮಾಡಿದೆ.
ಏನಿದು ವಿವಾದ?: 2017ರಲ್ಲಿ ವಿಭಾಗಾಧಿಕಾರಿಗಳಿಂದ ಅನುಮತಿ ಪಡೆದ ಆರು ಕುಟುಂಬಗಳ ರಕ್ಷಿತ್, ಕಾರ್ತಿಕ್, ಉಮೇಶ್, ನಿಂಗರಾಜ, ನಾಗರಾಜ, ರೇವಣ್ಣ ಅರ್ಚಕ ವೃತ್ತಿ ಮಾಡುತ್ತಿದ್ದಾರೆ. ಉಳಿದ 18 ಕುಟುಂಬಗಳು ವಿಭಾಗಾಧಿಕಾರಿಯ ಅನುಮತಿಗಾಗಿ ಕಾಯುತ್ತಿದ್ದಾರೆ. ಉಮೇಶ್ ದೇವಸ್ಥಾನದಲ್ಲಿ ಪೂಜೆ ನೆರವೇರಿಸುತ್ತಿದ್ದು, ಮತ್ತೊಂದು ಬಣದ ನಟೇಶ್ ನಮ್ಮ ಕುಟುಂಬಕ್ಕೂ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಕೇಳಿದ್ದು, ಕಲಹಕ್ಕೆ ಕಾರಣವಾಗಿದೆ. ಇದರ ನಡುವೆ, ಆದರೆ, ಅನುಮತಿ ಪಡೆದವರು, ತಹಸಿಲ್ದಾರ್‌ಗೆ ದೇವಸ್ಥಾನದ ಕೀಲಿ ಕೊಡುವುದಾಗಿ ಭಕ್ತರ ಸಮ್ಮುಖದಲ್ಲಿ ವಾಗ್ವಾದ ನಡೆಸಿದ್ದಾರೆ. ಕೊನೆಗೆ ಉಮೇಶ್ ಪೂಜೆ ಸ್ಥಗಿತಗೊಳಿಸಿ ದೇವಸ್ಥಾನಕ್ಕೆ ಬೀಗ ಹಾಕಿ ಹೊರ ನಡೆದಿದ್ದಾರೆ.
ವಿಷಯದ ಗಂಭೀರತೆ ತಿಳಿದ ತಹಸೀಲ್ದಾರ್ ವೈ.ಎಂ.ರೇಣು ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಎರಡು ಕುಟುಂಬಗಳ ಮನವೊಲಿಸಿದ್ದಾರೆ. ಸದ್ಯಕ್ಕೆ ಅನುಮತಿ ಪಡೆದಿರುವ ಕುಟುಂಬಗಳು ಪೂಜೆ ನೆರವೇರಿಸಲಿ ಉಳಿದ ಕುಟುಂಬಗಳಿಗೆ ಅನುಮತಿ ಕೊಡಿಸಲಾಗುವುದು ಎಂಬ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.