ಚೆಲ್ಲಾಪುರ ಪ್ರೌಢಶಾಲೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸಸಿ ನೆಟ್ಟು ನೀರೆರೆಯಲಾಯಿತು. ಅಕ್ಷತಾ ರೈ, ನಾಗಪ್ಪ, ಸೀತಾರಾಮ್, ಸಾವಿತ್ರಮ್ಮ, ಶಶಿಧರ್ ಇತರರಿದ್ದರು.
- ಚೆಲ್ಲಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗಪ್ಪ ಹೇಳಿಕೆ
ಅರಸೀಕೆರೆ ಗ್ರಾಮಾಂತರ: ಶ್ರೀ ಕ್ಷೇತ್ರ ಧರ್ಮಸ್ಥಳ ಸಮಾಜಮುಖಿಯಾದ ಆರೋಗ್ಯ, ಶಿಕ್ಷಣ, ನೈರ್ಮಲ್ಯ ಮೊದಲಾದ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಚೆಲ್ಲಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನಾಗಪ್ಪ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ದಿನ ಆಚರಣೆ ಅಂಗವಾಗಿ ಸೋಮವಾರ ಚೆಲ್ಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಸಿ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶ ಅಭಿವೃದ್ಧಿಯತ್ತ ಸಾಗುತ್ತಿರುವುದು ಒಂದೆಡೆಯಾದರೆ ಇದರೊಂದಿಗೆ ಅರಣ್ಯ ನಾಶವೂ ಆಗುತ್ತಿದೆ. ಇದನ್ನು ಸರಿದೂಗಿಸಲು ಎಲ್ಲರೂ ಪರಿಸರ ಕಾಪಾಡುವ ದೃಷ್ಟಿಯಿಂದ ಗಿಡಗಳನ್ನು ಬೆಳೆಸಬೇಕು. ಧರ್ಮಸ್ಥಳ ಕ್ಷೇತ್ರವು ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ಅಲ್ಲದೆ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಸ್ವಾವಲಂಬಿಯಾಗಲು ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಶ್ಲಾಘೀಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಅಧಿಕಾರಿ ಅಕ್ಷತಾ ರೈ ಮಾತನಾಡಿ, ಶ್ರೀ ಕ್ಷೇತ್ರದ ವತಿಯಿಂದ ದೇವಾಲಯಗಳ ಜೀರ್ಣೋದ್ಧಾರ, ಕೆರೆ ಅಭಿವೃದ್ಧಿ, ಶಾಲೆಗಳಿಗೆ ಪೀಠೋಪಕರಣಗಳು, ಶಿಕ್ಷಕರ ಕೊರತೆ ನೀಗಿಸುವುದು, ಶಾಲಾ ದುರಸ್ತಿ, ನೈರ್ಮಲ್ಯಕಾಪಾಡುವುದು, ಅಶಕ್ತರಿಗೆ ಮಾಶಾಸನ ಹಾಗೂ ಅಂಗವಿಕಲರಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ಕೊಡಲಾಗುತ್ತಿದೆ ಎಂದರು.
ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಎಚ್.ಡಿ.ಸೀತಾರಾಂ ಮಾತನಾಡಿ, ವಿದ್ಯಾರ್ಥಿಗಳಿಗೆ ನೀಡಲಾಗಿರುವ ಸಸಿಗಳನ್ನು ಜವಾಬ್ದಾರಿಯಿಂದ ಕಾಪಾಡಿಕೊಳ್ಳಬೇಕು. ಜತೆಗೆ ಪರಿಸರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಉತ್ತಮ ಶಿಕ್ಷಕ ವರ್ಗ ಈ ಶಾಲೆಯಲ್ಲಿ ಇದ್ದು, ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ ಎಂದರು.
ಶಿಕ್ಷಕ ಶಶಿಧರ್ ಮಾತನಾಡಿ, ಪ್ರಸ್ತುತ ರಾಜಧಾನಿ ದೆಹಲಿಯ ಸ್ಥಿತಿ ಏನಾಗಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿಯಲ್ಪಡುತ್ತಿದೆ. ಪ್ರಸ್ತುತ ದೆಹಲಿ ವಾಸಕ್ಕೆ ಯೋಗ್ಯವಲ್ಲದ ನಗರವಾಗುತ್ತಿದೆ. ಇದನ್ನು ನಾವು ಗಮನದಲ್ಲಿಟ್ಟುಕೊಂಡು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಬೇಕಿದೆ. ಜತೆಗೆ ಪ್ಲಾಸ್ಟಿಕ್ ಬಳಕೆಯಿಂದ ದೂರ ಇರಬೇಕು ಎಂದು ಸಲಹೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ ಇತರರಿದ್ದರು.