ಅರಕಲಗೂಡು ತಾಲೂಕಿನ ಲಕ್ಕೂರು ಮಕ್ಕಳ ಮನೆ ಶಾಲೆಯ ಮಕ್ಕಳ ದಂತವನ್ನು ವೈದ್ಯರು ತಪಾಸಣೆ ನಡೆಸಿದರು.
ಅರಕಲಗೂಡು: ತಾಲೂಕಿನ ಹನ್ಯಾಳು, ಲಕ್ಕೂರು ಹಾಗೂ ಮಧುರನಹಳ್ಳಿ ಗ್ರಾಮದ ಮಕ್ಕಳ ಮನೆ (ಎಲ್.ಕೆ.ಜಿ., ಯುಕೆಜಿ), ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 400ಕ್ಕೂ ಹೆಚ್ಚು ಮಕ್ಕಳಿಗೆ ಶುಕ್ರವಾರ ಉಚಿತ ಹಲ್ಲಿನ ತಪಾಸಣೆ ನಡೆಸಲಾಯಿತು.
ಹಾಸನದ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಹಾಗೂ ಹನ್ಯಾಳು ಹಿರಿಯ ವಿದ್ಯಾರ್ಥಿ ಬಳಗ ಸಹಯೋಗದಲ್ಲಿ ದಂತ ವೈದ್ಯರು ಮಕ್ಕಳಿಗೆ ಹಲ್ಲಿನ ಆರೈಕೆ, ದೈನಂದಿನ ಸ್ವಚ್ಛತೆ ಹಾಗೂ ಸರಿಯಾದ ರೀತಿಯಲ್ಲಿ ಬ್ರಷ್ ಮಾಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು. ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಸಲುವಾಗಿ ಸರಳ ಹಾಗೂ ಮನರಂಜನಾತ್ಮಕ ರೀತಿಯಲ್ಲಿ ಮಾರ್ಗದರ್ಶನ ನೀಡಲಾಯಿತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.
ಹಾಸನ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಅಧ್ಯಕ್ಷೆ ಡಾ. ಶ್ರುತಿ ಹರ್ಷ ಮಾತನಾಡಿ, ಎಲ್ಲರೂ ಹಲ್ಲುಗಳ ರಕ್ಷಣೆಯತ್ತ ನಿಗಾ ವಹಿಸಬೇಕು. ಇಂತಹ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳು ಮಕ್ಕಳ ಉತ್ತಮ ಆರೋಗ್ಯ ಮತ್ತು ಉತ್ತಮ ಅಭ್ಯಾಸಗಳ ನಿರ್ಮಾಣಕ್ಕೆ ಅತ್ಯಂತ ಸಹಾಯಕವಾಗಿವೆ. ಡಾ. ಅಶೋಕ್ ಹನ್ಯಾಳ್ ಹಾಗೂ ಎಚ್.ಪಿ. ಸಂತೋಷ್ ಅವರ ಸೇವಾಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ರಮ್ಯಾ ವೆಂಕಟೇಶ್, ಡಾ.ವಿ.ಪಿ.ವೈಷ್ಣವ್, ಡಾ.ಜಿ.ಕಾವ್ಯಶ್ರೀ ಅವರು ತಪಾಸಣೆ ನಡೆಸಿದರು. ಮುಖ್ಯ ಶಿಕ್ಷಕರಾದ ರವಿಕುಮಾರ್, ಮಂಜುನಾಥ್, ನಾಗರಾಜ್, ವೆಂಕಟೇಶ್ ಹಾಗೂ ಸಹ ಶಿಕ್ಷಕರು, ಮಕ್ಕಳ ಮನೆ ಶಿಕ್ಷಕಿಯರಾದ ಮಂಜುಳಾ, ರಕ್ಷಿತಾ ಹಾಗೂ ಗೌರಮ್ಮ, ಅಂಗನವಾಡಿ ಶಿಕ್ಷಕಿಯರಾದ ನಂದಿನಿ ಮತ್ತು ಶಶಿ, ಅಡುಗೆ ಸಿಬ್ಬಂದಿ ಹಾಗೂ ಎಸ್‌ಡಿಎಂಸಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಸಹಕರಿಸಿದರು.