ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
- ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ
- ಹಾಸನದಲ್ಲಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
ಹಾಸನ: ಆಲೂರು ತಾಲೂಕಿನ ಹೊಸಮಠ ಗ್ರಾಮದಲ್ಲಿ ಕ್ರೈಸ್ತ ಧರ್ಮದ ಪವಿತ್ರ ಸ್ಥಳ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿರುವುದನ್ನು ಸ್ಥಗಿತಗೊಳಿಸಬೇಕು, ಬೇಲೂರು ತಾಲೂಕು ಬಂಟೇನಹಳ್ಳಿ 2ನೇ ವಾರ್ಡ್‌ಗೆ ಮೂಲಸೌಕರ್ಯ ಕಲ್ಪಿಸಬೇಕು ಹಾಗೂ ಹಾಸನ ನಗರದ ಬೀರನಹಳ್ಳಿ ಕೆರೆ ನಿವಾಸಿಗಳಿಗೆ ನಿವೇಶನ ಗುರುತಿಸಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ತೆರಳಿದ ಕಾರ್ಯಕರ್ತರು ಎನ್.ಆರ್.ವೃತ್ತದ ಮೂಲಕ ಡಿಸಿ ಕಚೇರಿ ಆವರಣಕ್ಕೆ ಬಂದು ಧರಣಿ ಆರಂಭಿಸಿದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ ಮಾತನಾಡಿ, ಆಲೂರು ತಾಲೂಕಿನ ಹೊಸಮಠ ಗ್ರಾಮದ ಶಿಲುಬೆ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈ ವೇಳೆ ಮಾಡುವ ಸ್ಫೋಟದಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.
ಬೆಟ್ಟದ ಸುತ್ತಲಿನ ಮನೆಗಳು ಬಿರುಕು ಬಿಟ್ಟಿದ್ದು, ಜನರು ಭಯದ ನಡುವೆ ಬದುಕುವಂತಾಗಿದೆ. ಭಾರಿ ವಾಹನ ನಿರಂತರವಾಗಿ ಸಂಚರಿಸುತ್ತಿರುವುದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಶಾಲಾ ವಾಹನಗಳು ಗ್ರಾಮಗಳಿಗೆ ಬರಲು ನಿರಾಕರಿಸುತ್ತಿದ್ದು ಇದರಿಂದ ಮಕ್ಕಳು ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ ಎಂದು ದೂರಿದರು.
ಮಳೆಗಾಲದಲ್ಲಿ ಗಣಿಗಾರಿಕೆ ಪ್ರದೇಶದ ಕಲುಷಿತ ನೀರು ಮತ್ತು ಧೂಳು ಸುತ್ತಮುತ್ತಲಿನ ಕೃಷಿ ಭೂಮಿ ಸೇರಿ ಕಾಫಿ, ಮೆಣಸು, ಭತ್ತ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬೇಲೂರು ತಾಲೂಕಿನ ಬಂಟೇನಹಳ್ಳಿ ಗ್ರಾಪಂ ವ್ಯಾಪ್ತಿಯ ವಾರ್ಡ್ ನಂ.2ರ ದೇವರಾಜಪುರ ಅಂಬೇಡ್ಕರ್ ಬೀದಿಯಲ್ಲಿ 1950 ರಿಂದ ಸುಮಾರು 300 ರಿಂದ 400 ಕುಟುಂಬಗಳು ಮನೆ ಕಟ್ಟಿಕೊಂಡು ವಾಸಿಸುತ್ತಿವೆ. ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಇತರ ಸಮುದಾಯಗಳ ಜನರು ವಾಸಿಸುತ್ತಿದ್ದರೂ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಸೌಲಭ್ಯ ಇಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾರೂ ಸ್ಪಂದಿಸಿಲ್ಲ ಎಂದು ದೂರಿದರು.
ಇತ್ತೀಚೆಗೆ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ಇಲ್ಲಿನ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರ ಹಾಗೂ ಅಧಿಕಾರಿಗಳು ಈ ವಿಷಯದಲ್ಲಿ ಸೂಕ್ತ ತನಿಖೆ ನಡೆಸಿ, ರಿಯಲ್ ಎಸ್ಟೇಟ್ ದೌರ್ಜನ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನಗರದ ರಾಘವೇಂದ್ರ ಕಾಲನಿ (ಬೀರನಹಳ್ಳಿ ಕೆರೆ) ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 75 ಬಡ ಕುಟುಂಬಗಳನ್ನು 2007ರ ಮೇ 11 ರಂದು ತೆರವುಗೊಳಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಅರ್ಹರಿಗೆ ನಿವೇಶನ ನೀಡಿಲ್ಲ. ನಿವೇಶನ ಸಿಗದ ಕಾರಣ ಬಡ ಕುಟುಂಬಗಳು ಬಾಡಿಗೆ ಮನೆಗಳಲ್ಲಿ ವಾಸಿಸುವಂತಾಗಿದ್ದು, ಹಲವರಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವರು ಆರ್ಥಿಕ ಸಂಕಷ್ಟದಿಂದ ಬೀದಿ ಪಾಲಾಗುವ ಪರಿಸ್ಥಿತಿಯಲ್ಲಿದ್ದಾರೆ. ಇವರಿಗೆ ನಿವೇಶನ ನೀಡಿ ಮನೆ ನಿರ್ಮಾಣಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ರಾಜ್ಯ ಸಂಚಾಲಕ ಮಹಮ್ಮದ್ ಸಾದಿಕ್, ಸ್ಥಳೀಯರಾದ ಫ್ರಾನ್ಸಿಸ್ ಕ್ಸೇವಿಯರ್, ಫಾದರ್ ಪ್ರಶಾಂತ್, ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಉಪಾಧ್ಯಕ್ಷ ವೆಂಕಟೇಶ್, ಅರುಣ ಭಾಸ್ಕರ್, ಪವಿತ್ರಾ, ರಂಗಮ್ಮ, ಕವಿತಾ ಇದ್ದರು.