ಅರಕಲಗೂಡಿನಲ್ಲಿ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಗಣೇಶ್ ವೇಲಾಪುರಿ ಮಾತನಾಡಿದರು. ಬಿ.ಸಿ. ರಾಜೇಶ್, ಚಂದ್ರಣ್ಣ, ದುಮ್ಮಿ ಕೃಷ್ಣ, ನಿಂಗರಾಜ್, ಗಣೇಶ್, ಶಂಕರ್ ಇದ್ದರು.
ಅರಕಲಗೂಡು: ಬಲಗೈ ಸಮುದಾಯಕ್ಕೆ ಮಾರಕವಾದ ನಾಗಮೋಹನ ದಾಸ್ ವರದಿ ರದ್ದುಗೊಳಿಸಿ ನೊಂದ ಅಸ್ಪಶ್ಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ಗಣೇಶ್ ವೇಲಾಪುರಿ ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಅಧಿಕವಿದ್ದರೂ ನಾಗಮೋಹನ ದಾಸ್ ವರದಿಯಲ್ಲಿ ಉದ್ದೇಶಪೂರ್ವಕವಾಗಿಯೇ ಸಮುದಾಯದ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿರುವುದು ಎದ್ದು ಕಾಣಿಸುತ್ತಿದೆ. ಮೀಸಲಾತಿಯಲ್ಲಿ ಅಪಾರ ಅನ್ಯಾಯವಾಗಿದ್ದು ಇದಕ್ಕೆ ನಮ್ಮ ವಿರೋಧವಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವಕೀಲ ಬಿ.ಸಿ. ರಾಜೇಶ್ ಮಾತನಾಡಿ, ಬಲಗೈ ಸಮುದಾಯಗಳ ಒಕ್ಕೂಟವು ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಮಾ.25 ರಂದು ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಿದೆ. ಒಳ ಮೀಸಲಾತಿ ಕುರಿತಂತೆ ಸರ್ಕಾರ ನೇಮಿಸಿದ್ದ ನಾಗಮೋಹನ ದಾಸ್ ಸಮಿತಿ ನೀಡಿರುವ ವರದಿಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ವರದಿ ಸಮಪರ್ಕ ರೀತಿಯಲ್ಲಿ ಇಲ್ಲ. ಹೀಗಾಗಿ ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ ಜಾರಿಗೆ ಆಗ್ರಹಿಸಿ ಜ್ಞಾನ ಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ಒಳ ಮೀಸಲಾತಿ ಕುರಿತು ಸರ್ಕಾರ ನೇಮಿಸಿದ್ದ ಏಕ ಸದಸ್ಯ ವಿಚಾರಣಾ ಆಯೋಗದ ವರದಿ ಕುರಿತು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ನೇರ ನೇಮಕಾತಿಗೆ ಹೊರಡಿಸಿರುವ ಆದೇಶವು ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಪಾಲಿಗೆ ಮರಣ ಶಾಸನವಾಗಿದೆ. ಅಸ್ಪಶ್ಯ ಸಮುದಾಯಗಳಾದ ಬಲಗೈ ಮತ್ತು ಎಡಗೈ ಸಮುದಾಯಗಳಿಗಿಂತ ಮೀಸಲಾತಿ ಪಟ್ಟಿಯಲ್ಲಿರುವ ಸ್ಪೃಷ್ಯ ಸಮಾಜಗಳು ಶೈಕ್ಷಣಿಕವಾಗಿ ಹೆಚ್ಚಿನ ಸ್ಥಾನಗಳನ್ನು ಪಡೆದಿರುವುದು ಎರಡೂ ಸಮುದಾಯಗಳಿಗೆ ಮಾಡಿರುವ ಅನ್ಯಾಯವಾಗಿದೆ. ನಾವಿಬ್ಬರೂ ಸೇರಿ ಈ ಅಸಮಾನತೆ ವಿರುದ್ಧ ಹೋರಾಟ ನಡೆಸಬೇಕಿತ್ತು. ಆದರೆ, ನಮ್ಮಲ್ಲೇ ಅಸಮಾನತೆ ಉಂಟು ಮಾಡಲಾಗಿದೆ. ನಮ್ಮ ಹೋರಾಟ ಎಡಗೈ ಸಮಾಜದ ವಿರುದ್ಧವಲ್ಲ, ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಅಗ್ರಹಿಸುವುದಾಗಿದೆ ಎಂದು ಸ್ಪಷ್ಟಪಡಿಸಿದರು.
ಮುಖಂಡರಾದ ಚಂದ್ರಣ್ಣ, ದುಮ್ಮಿ ಕೃಷ್ಣ, ನಿಂಗರಾಜ್, ಗಣೇಶ್, ಶಂಕರ್ ಇದ್ದರು.