ವೀರಶೈವ-ಲಿಂಗಾಯಿತ ಹಾಗೂ ಒಕ್ಕಲಿಗ ಕಾಂಗ್ರೆಸ್ ಮುಖಂಡರ ಸಭೆ ಸಕಲೇಶಪುರ ಪಟ್ಟಣದ ಲಯನ್ಸ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. 
ಹಾಸನ

ಡಿ.ಸಿ.ಸಣ್ಣಸ್ವಾಮಿಯನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹ

ಸಕಲೇಶಪುರ: ಜಿಪಂ ಮಾಜಿ ಸದಸ್ಯ ಡಿ.ಸಿ.ಸಣ್ಣಸ್ವಾಮಿ ಹಾಗೂ ಅವರ ತಂಡವನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಮಂಗಳವಾರ ಪಟ್ಟಣದ ಲಯನ್ಸ್ ಹಾಲ್‌ನಲ್ಲಿ ಆಯೋಜಿಸಿದ್ದ ವೀರಶೈವ-ಲಿಂಗಾಯಿತ ಹಾಗೂ ಒಕ್ಕಲಿಗ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಮುಖಂಡರು, ಪಕ್ಷದ್ರೋಹವನ್ನು ಕಾಯಕವನ್ನಾಗಿ ಮಾಡಿಕೊಂಡಿರುವ ಡಿ.ಸಿ.ಸಣ್ಣಸ್ವಾಮಿ ತಂಡ ಪ್ರತಿ ಚುನಾವಣೆಯಲ್ಲಿ ಎದುರಾಳಿಗಳೊಂದಿಗೆ ಶಾಮೀಲಾಗಿ ಪಕ್ಷದ ಅಭ್ಯರ್ಥಿ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಪಕ್ಷ ಒಗ್ಗಟ್ಟಿನಿಂದ ಇದ್ದಾಗಲೆಲ್ಲ ಪಕ್ಷದಲ್ಲಿ ಭಿನ್ನಾಭಿಪ್ರಾಯ ಹುಟ್ಟುಹಾಕುವುದು ಇವರ ಕೆಲಸವಾಗಿದೆ. 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ನಂತರ ಪಕ್ಷ ಸಂಘಟನೆಯಿಂದ ದೂರವೇ ಉಳಿದ ಇವರು ನಂತರ ನಡೆದ ಎಲ್ಲ ವಿಧಾನಸಭಾ ಚುನಾವಣೆಯಲ್ಲೂ ಷಡ್ಯಂತ್ರ ಹೆಣೆಯುವ ಮೂಲಕ ಪಕ್ಷವನ್ನು ಮೂಲೆಗುಂಪು ಮಾಡುತ್ತಿದ್ದಾರೆ.
ಕ್ಷೇತ್ರ ಮೀಸಲಾದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಫಲಿತಾಂಶದ ನಂತರ ಕ್ಷೇತ್ರದತ್ತ ಮುಖ ಮಾಡದೆ ಫಲಾಯನ ಮಾಡಿದ್ದಾರೆ. ಆದರೆ, ಮುರಳಿಮೋಹನ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರೂ ಕ್ಷೇತ್ರದಲ್ಲಿ ಸಂಚರಿಸುತ್ತ ಸಾರ್ವಜನಿಕರ ಕುಂದುಕೊರತೆ ಕೇಳುತ್ತಾ ಪಕ್ಷವನ್ನು ಸದೃಢಗೊಳಿಸುತ್ತಿದ್ದಾರೆ. ಆದ್ದರಿಂದ ಸಣ್ಣಸ್ವಾಮಿ ಹಾಗೂ ಅವರ ಬೆಂಬಲಿಗರ ತಂಡವನ್ನು ಪಕ್ಷದಿಂದ ಉಚ್ಚಾಟಿಸಬೇಕು. ಸಣ್ಣಸ್ವಾಮಿ ಭಿನ್ನಾಮತದ ಕುರಿತು ರಾಜ್ಯಕ್ಕೆ ನಿಯೋಗ ತೆರಳಿ ರಾಜ್ಯ ಮುಖಂಡರ ಭೇಟಿಯಾಗಿ ಕ್ಷೇತ್ರದ ವಿದ್ಯಮಾನ ತಿಳಿಸುವ ಕೆಲಸ ಮಾಡೋಣ ಎಂಬ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಮಾಜಿ ಅಧ್ಯಕ್ಷ ವಿದ್ಯಾಶಂಕರ್, ಮುಖಂಡರಾದ ದೇವಾಲದಕೆರೆ ಲೋಕೇಶ್, ಅರವಿಂದ್, ಬಿ.ಡಿ.ವಿಜಯ್, ಎಚ್.ಎಚ್.ಉದಯ ಇದ್ದರು.