ಮುಸ್ಲಿಂ ಧಾರ್ಮಿಕ ಪ್ರಾರ್ಥನೆ ಹಾಗೂ ಕುರಾನ್ ಪಠಾಣಕ್ಕೆ ಅವಕಾಶ ನೀಡಬಾರದು ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಶುಕ್ರವಾರ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಸಲ್ಲಿಸಿದರು.
ಬೇಲೂರು: ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮರಥೋತ್ಸವದಂದು ಮುಸ್ಲಿಂ ಧಾರ್ಮಿಕ ಪ್ರಾರ್ಥನೆ ಹಾಗೂ ಕುರಾನ್ ಪಠಾಣಕ್ಕೆ ಅವಕಾಶ ನೀಡಬಾರದು ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಶುಕ್ರವಾರ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಸಲ್ಲಿಸಿದರು.
ಹಿಂದೂಪರ ಸಂಘಟನೆಯ ರಾಜ್ಯ ಸಂಚಾಲಕ ರಘುಜಿ ಮಾತನಾಡಿ, ಬೇಲೂರಿನಲ್ಲಿ ಮಾ.31ರಂದು ಜರುಗಲಿರುವ ಬ್ರಹ್ಮರಥೋತ್ಸವವು ಇತಿಹಾಸ ಹೊಂದಿದೆ. ವಿಶೇಷವೆಂದರೆ ಬ್ರಹ್ಮರಥೋತ್ಸವದಂದು ದೊಡ್ಡಮೇದೂರಿನ ಮುಸ್ಲಿಂ ಧರ್ಮಗುರುವನ್ನು ಆಹ್ವಾನಿಸಿ ಪ್ರಾರ್ಥನೆ ನಡೆಸುವ ಪದ್ಧತಿ ಅನುಸರಿಸಲಾಗುತ್ತಿದೆ. ಆದರೆ ದೇಗುಲದ ನಿಯಮಾವಳಿಗಳಲ್ಲಿ ಎಲ್ಲಿಯೂ ಇಂತಹ ಪ್ರಾರ್ಥನೆಗೆ ಯಾವುದೇ ಪ್ರಧಾನವಿಲ್ಲ. 2025ರಲ್ಲಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಆದರೂ ದೇವಸ್ಥಾನದ ಅಧಿಕಾರಿಗಳು ದೇವಸ್ಥಾನದ ಒಳಭಾಗದ ಬಾವಿಯ ಸಮೀಪ ಪ್ರಾರ್ಥನೆಗೆ ಅವಕಾಶ ನೀಡಿದ್ದರು ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ರಥೋತ್ಸವದ ದಿನ ಕುರಾನ್ ಪಠಣ ಅಥವಾ ಪ್ರಾರ್ಥನೆ ನಡೆಯಬಾರದು. ಪ್ರಾರ್ಥನೆ ನಡೆಸುವ ಪ್ರಯತ್ನ ಮಾಡಿದರೆ, ಅದರಿಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ದೇವಸ್ಥಾನದ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ. ಧಾರ್ಮಿಕ ಸೌಹಾರ್ದತೆಗೆ ಧಕ್ಕೆಯಾಗದಂತೆ ಪರಂಪರೆಯನ್ನು ಕಾಪಾಡುವುದು ಮುಖ್ಯ. ಕಾಣಿಕೆ ಸಲ್ಲಿಸುವಂತಹ ಸಂಪ್ರದಾಯ ಇದ್ದರೆ ಅದನ್ನು ಮುಂದುವರಿಸಬಹುದು. ಸಂಘರ್ಷದ ವಾತಾವರಣ ನಿರ್ಮಾಣವಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ದೇವಸ್ಥಾನದ ಇಒ ಹಾಗೂ ಶಾಸಕರಿಗೂ ಮನವಿ ಸಲ್ಲಿಸಲಾಗುವುದು ಎಂದರು.
ಹಿಂದೂಪರ ಸಂಘಟನೆಗಳ ಮುಖಂಡರಿದ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಈ ವಿಷಯವನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಹಿಂದೂಪರ ಸಂಘಟನೆಗಳ ಮುಖಂಡರಾದ ಮಂಜುನಾಥ್, ದಿವೀತ್, ಧನುಷ್ ಸೇರಿದಂತೆ ಇತರರಿದ್ದರು.