ಕನಿಷ್ಠ ವೇತನ ನಿಗದಿ, ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರ ಪರವಾದ ತಿದ್ದುಪಡಿ, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ಪ್ರತ್ಯೇಕ ಶಾಸನ ರೂಪಿಸುವಂತೆ ಒತ್ತಾಯಿಸಿ ಸಿಐಟಿಯು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು. 
ಹಾಸನ

ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಗೆ ಆಗ್ರಹ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಮಾಸಿಕ 36 ಸಾವಿರ ರೂ.ನೀಡಲು ಒತ್ತಾಯ
  • ಸಿಐಟಿಯು ಪ್ರತಿಭಟನೆ
ಹಾಸನ: ಕನಿಷ್ಠ ವೇತನ ನಿಗದಿ, ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರ ಪರವಾದ ತಿದ್ದುಪಡಿ, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ಪ್ರತ್ಯೇಕ ಶಾಸನ ರೂಪಿಸುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿ, ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಜೀವನಮಟ್ಟ ಸುಧಾರಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಇತ್ತೀಚೆಗೆ ಕನಿಷ್ಠ ವೇತನವನ್ನು ಪರಿಷ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ವಿವಿಧ ಉದ್ದಿಮೆಗಳಿಗೆ ಪ್ರತ್ಯೇಕವಾಗಿ ವೇತನ ನಿಗದಿಪಡಿಸುವ ಬದಲು ಬಹುತೇಕ ಉದ್ದಿಮೆಗಳಿಗೆ ಏಕರೂಪದ ವೇತನ ವ್ಯವಸ್ಥೆ ಜಾರಿಗೊಳಿಸಿರುವುದು ಹಾಗೂ ಹಿಂದಿನ ನಾಲ್ಕು ವಲಯಗಳ ಬದಲಿಗೆ ಮೂರು ವಲಯಗಳ ವ್ಯವಸ್ಥೆ ಅಳವಡಿಸಿರುವುದು ಕಾರ್ಮಿಕರ ಪರವಾದ ಹೆಜ್ಜೆಯಾಗಿದೆ ಎಂದು ಸಿಐಟಿಯು ಅಭಿಪ್ರಾಯಪಟ್ಟಿದೆ ಎಂದರು.
ಪ್ರಸ್ತುತ ನಿಗದಿಪಡಿಸಿರುವ ವೇತನವು ಕಾರ್ಮಿಕರ ಜೀವನ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿಲ್ಲ. ಸುಪ್ರೀಂ ಕೋರ್ಟ್ 1992ರ ‘ವರ್ಕ್‌ಮೆನ್ ವರ್ಸಸ್ ರೆಪ್ಟಾಕೋಸ್ ಬ್ರೆಟ್ ಆ್ಯಂಡ್ ಕಂಪನಿ’ ಪ್ರಕರಣದಲ್ಲಿ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಕಾರ್ಮಿಕ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯವಿರುವ ಆಹಾರ, ವಸತಿ, ಶಿಕ್ಷಣ, ಆರೋಗ್ಯ, ಸಾರಿಗೆ ಹಾಗೂ ಇತರ ಮೂಲ ಸೌಕರ್ಯ ಅಗತ್ಯಗಳನ್ನು ಪರಿಗಣಿಸಿ ವೇತನ ನಿಗದಿಪಡಿಸಬೇಕಾಗಿದೆ. ಇದೇ ಮಾನದಂಡಗಳನ್ನು ಆಧರಿಸಿ ರಾಜ್ಯದಲ್ಲಿ ಕನಿಷ್ಠ ವೇತನ ಪರಿಷ್ಕರಿಸಬೇಕೆಂದು ಕರ್ನಾಟಕ ಹೈಕೋರ್ಟ್ ಕೂಡ ನಿರ್ದೇಶನ ನೀಡಿತ್ತು. ಆದರೆ ಈ ಮಾನದಂಡಗಳಿಗೆ ಸರ್ಕಾರದ ಇತ್ತೀಚಿನ ಅಧಿಸೂಚನೆ ಸಂಪೂರ್ಣವಾಗಿ ಅನುಗುಣವಾಗಿಲ್ಲ ಎಂದು ಆರೋಪಿಸಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ, ದಿನನಿತ್ಯದ ಜೀವನ ವೆಚ್ಚ ಮತ್ತು ಕುಟುಂಬ ನಿರ್ವಹಣೆಯ ವಾಸ್ತವಿಕ ಅಗತ್ಯಗಳನ್ನು ಪರಿಗಣಿಸಿದರೆ ಕನಿಷ್ಠ ವೇತನವು ಸರಾಸರಿ 36 ಸಾವಿರ ರೂ. ಇರಬೇಕು. ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಕಾರ್ಮಿಕರಿಗೆ ಪರಿಷ್ಕೃತ ವೇತನದಿಂದ ಪ್ರಯೋಜನವಾಗಲಿದೆಯಾದರೂ, ನೈಜ ಜೀವನ ವೆಚ್ಚಕ್ಕೆ ತಕ್ಕಂತೆ ಮತ್ತಷ್ಟು ಹೆಚ್ಚಳ ಅಗತ್ಯವಿದೆ ಎಂದು ಹೇಳಿದರು.
ಸರ್ಕಾರ ಕರಡು ಅಧಿಸೂಚನೆಯನ್ನು 2025ರ ಏಪ್ರಿಲ್ 11ರಂದು ಪ್ರಕಟಿಸಿದ್ದರೂ, ಅಂತಿಮ ಅಧಿಸೂಚನೆಯನ್ನು 2026ರ ಮೇ 22ರಿಂದ ಜಾರಿಗೆ ತಂದಿದೆ. ಇದರಿಂದ ಕಾರ್ಮಿಕರು ಸುಮಾರು ಒಂದು ವರ್ಷದ ಅವಧಿಯ ಬಾಕಿ ವೇತನದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಪರಿಷ್ಕೃತ ವೇತನವನ್ನು 2025ರ ಏಪ್ರಿಲ್ 11ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ತಂದು ಕಾರ್ಮಿಕರಿಗೆ ದೊರೆಯಬೇಕಾದ ವೇತನ ಬಾಕಿಯನ್ನು ಪಾವತಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪಾ, ಖಜಾಂಚಿ ಅರವಿಂದ, ಪ್ರಧಾನ ಕಾರ್ಯದರ್ಶಿ ಮಂಜುಳಾ, ಕೆ.ಟಿ. ಹೊನ್ನೇಗೌಡ, ಸೌಮ್ಯಾ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಇದ್ದರು.