ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಕರೆ ನೀಡಿದ ಮುಷ್ಕರ ಬೆಂಬಲಿಸಿ ಬ್ಯಾಂಕ್ ನೌಕರರು ಪ್ರತಿಭಟನೆಗೆ ನಡೆಸಿದರು.
- ವಾರದಲ್ಲಿ 5 ದಿನ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಆಗ್ರಹ
- ದೇಶವ್ಯಾಪಿ ಮುಷ್ಕರ ಬೆಂಬಲಿಸಿ ನೌಕರರ ಪ್ರತಿಭಟನೆ
ಹಾಸನ: ಭಾರತೀಯ ಬ್ಯಾಂಕ್‌ಗಳ ಸಂಘಟನೆ (ಐಬಿಐ) ಹಾಗೂ ಬ್ಯಾಂಕ್ ಸಿಬ್ಬಂದಿ ಸಂಘಟನೆಗಳ ನಡುವೆ 2023ರಲ್ಲಿ ನಡೆದ 12ನೇ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಮಂಗಳವಾರ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದಂತೆ ಹಾಸನ ಜಿಲ್ಲೆಯಾದ್ಯಂತ ಎಲ್ಲ ಬ್ಯಾಂಕ್ ನೌಕರರು ಪ್ರತಿಭಟನೆಗೆ ನಡೆಸಿದರು.
ನಗರದ ಎನ್.ಆರ್.ವೃತ್ತದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ ಎದುರು ನೂರಾರು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಎನ್.ಆರ್. ವೃತ್ತದಿಂದ ಹೇಮಾವತಿ ಪ್ರತಿಮೆವರೆಗೆ ಬೃಹತ್ ಮೆರವಣಿಗೆ ನಡೆಸಿ ತಮ್ಮ ನ್ಯಾಯಯುತ ಬೇಡಿಕೆಗೆ ಬೆಂಬಲ ಸೂಚಿಸಿದರು. ಈ ಮುಷ್ಕರದಿಂದ ಬ್ಯಾಂಕ್ ವ್ಯವಹಾರಗಳು ಸ್ಥಗಿತಗೊಂಡು ಸಾರ್ವಜನಿಕರಿಗೆ ತಾತ್ಕಾಲಿಕ ತೊಂದರೆ ಉಂಟಾಯಿತು.
ಯು.ಎಫ್.ಬಿ.ಯು. ಹಾಸನ ಘಟಕದ ಸಂಚಾಲಕ ಆರ್.ಕುಮಾರ್ ಮಾತನಾಡಿ, 2024ರ ಮಾರ್ಚ್‌ನಲ್ಲಿ ನಡೆದ 12ನೇ ದ್ವಿಪಕ್ಷೀಯ ಒಪ್ಪಂದದಲ್ಲಿ ಬ್ಯಾಂಕ್ ಸಿಬ್ಬಂದಿ ಹಲವು ಬೇಡಿಕೆಗಳೊಂದಿಗೆ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನೂ ಒಪ್ಪಿಕೊಳ್ಳಲಾಗಿದೆ. ಆದರೆ, ಒಪ್ಪಂದಕ್ಕೆ ವರ್ಷ ಸಮೀಪಿಸುತ್ತಿದ್ದರೂ ಸರ್ಕಾರ ಇದನ್ನು ಜಾರಿಗೊಳಿಸಲು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳಿನಿಂದ ವಿವಿಧ ರೀತಿಯ ಶಾಂತಿಯುತ ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರೂ ನಿರ್ಲಕ್ಷೃ ವಹಿಸಿದ ಕಾರಣ ಅನಿವಾರ್ಯವಾಗಿ ಮುಷ್ಕರಕ್ಕೆ ಇಳಿಯಬೇಕಾಯಿತು. ಬ್ಯಾಂಕ್ ಸಿಬ್ಬಂದಿ ಮಿತಿಮೀರಿದ ಕೆಲಸದ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಖಿನ್ನತೆ, ಆತ್ಮಹತ್ಯೆ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿವೆ. ಇದರಿಂದ ಉತ್ಪಾದಕತೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಒತ್ತಡವನ್ನು ಕಡಿಮೆ ಮಾಡಲು ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದರು.
ಈಗಾಗಲೇ ಆರ್‌ಬಿಐ, ಎಲ್‌ಐಸಿ, ಸಾಮಾನ್ಯ ವಿಮಾ ಕಂಪನಿಗಳು, ಸೆಬಿ, ಷೇರು ಮಾರುಕಟ್ಟೆ, ವಿದೇಶಿ ವಿನಿಮಯ ಮಾರುಕಟ್ಟೆ ಸೇರಿದಂತೆ ಹಣಕಾಸು ವಲಯದ ಅನೇಕ ಸಂಸ್ಥೆಗಳು ವಾರದಲ್ಲಿ ಐದು ದಿನಗಳಷ್ಟೇ ಕಾರ್ಯನಿರ್ವಹಿಸುತ್ತಿವೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಈ ಪದ್ಧತಿ ಬಹಳ ಹಿಂದೆಯೇ ಜಾರಿಯಲ್ಲಿದೆ. ಹೀಗಿರುವಾಗ ಬ್ಯಾಂಕ್ ಸಿಬ್ಬಂದಿ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಯು.ಎಫ್.ಬಿ.ಯು. ಹಾಸನ ಘಟಕದ ಸಂಚಾಲಕ ಆರ್.ಕುಮಾರ್ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳ ಸಂಘಟನೆ (ಸಿಬಿಒಎ) ಸಂಘಟನಾ ಕಾರ್ಯದರ್ಶಿ ಎ.ಜೆ. ಜಾವೀದ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸಂಘಟನೆಯ ಜಿ.ಟಿ. ಲೋಕೇಶ್, ಜಯಚಂದ್ರ, ಎಸ್‌ಬಿಐ ಸಿಬ್ಬಂದಿ ಸಂಘಟನೆಯ ಚೇತನ್, ಅಶೋಕ್ ಭಟ್, ಕರ್ನಾಟಕ ಬ್ಯಾಂಕ್‌ನ ಶೀಲಾ ಇತರರಿದ್ದರು.