ಅರಸೀಕೆರೆ ನಗರದ ರೈಲ್ವೆ ಹಾಗೂ ಬಸ್ ನಿಲ್ದಾಣದ ಬಳಿ ಬಸವೇಶ್ವರರ ಪುತ್ಥಳಿಗೆ ಶಾಸಕ ಸ್ಥಳ ನಿಗದಿಪಡಿಸಿದ ಬಳಿಕ ಮಾತನಾಡಿದರು. ಎಂ.ಜಿ.ಶಿವಶಂಕರ ಸ್ವಾಮಿ, ಶಶಿಧರ್, ಚಂದ್ರಶೇಖರ್, ವೆಂಕಟಮುನಿ, ಮಂಜುನಾಥ್ ಇದ್ದರು.
ಅರಸೀಕೆರೆ: ಬಸವಾಭಿಮಾನಿಗಳ ಅಪೇಕ್ಷೆಯಂತೆ ನಗರದ ರೈಲ್ವೆ ಹಾಗೂ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ವೃತ್ತದಲ್ಲಿ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಅಶ್ವರೂಢ ಬಸವೇಶ್ವರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸುವ ಜತೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್‌ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಸೋಮವಾರ ಸ್ಥಳ ನಿಗದಿ ವೇಳೆ ವೀರಶೈವ ಲಿಂಗಾಯತ ಸಮಾಜದ ಮುಖಂಡರೊಂದಿಗೆ ಮಾತನಾಡಿದರು. ತಾಲೂಕಿನ ಜನರ ಬಹುದಿನಗಳ ಕನಸು ನನಸಾಗುವ ಸಮಯ ಹತ್ತಿರವಾಗಿದೆ. ಮನುಕುಲದ ಏಳಿಗೆಗೆ ಶ್ರಮಿಸಿದ ಬಸವಣ್ಣನವರ ತತ್ವ, ಉದಾತ್ತ ಚಿಂತನೆ, ಆದರ್ಶಗಳ ಕೊಡುಗೆಯನ್ನು ಎಂದಿಗೂ ಮರೆಯುವಂತಿಲ್ಲ ಎಂದರು.
ಬಸವಣ್ಣ ನೀಡಿದ ಶಾಂತಿ, ನೆಮ್ಮದಿಯ ಸಂದೇಶಗಳು ಪ್ರಪಂಚಕ್ಕೆ ಮಾದರಿಯಾಗಿವೆ. ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಈಗಾಗಲೇ ಶಿಲಾನ್ಯಾಸ ಮಾಡಿದ್ದಾರೆ. ಸ್ಥಳ ನಿಗದಿ ಉದ್ದೇಶದಿಂದ ಎಲ್ಲರೊಂದಿಗೆ ಚರ್ಚೆ ನಡೆಯುತ್ತಿದೆ. ಸರ್ಕಾರದಿಂದ 40 ಲಕ್ಷ ರೂ. ಅನುದಾನ ಬಂದಿದೆ. ಸಮಾಜ ಬಾಂಧವರು ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಮುಂದೆ ಬಂದಿರುವುದು ಸಂತೋಷದ ಸಂಗತಿಯಾಗಿದೆ. ಬಸವ ಜಯಂತಿ ವೇಳೆಗೆ ಲೋಕಾರ್ಪಣೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎಲ್ಲರೂ ಪಕ್ಷಾತೀತವಾಗಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಂದಾಗಿ ಮಹನೀಯರನ್ನು ಗೌರವಿಸುವ ಕೆಲಸ ಮಾಡೋಣ ಎಂದು ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್ ಮಾತನಾಡಿ, ಕ್ಷೇತ್ರದ ಜನತೆಯ ಬಹುದಿನಗಳ ಕನಸು ಶಾಸಕರ ಇಚ್ಛಾಶಕ್ತಿಯಿಂದಾಗಿ ಸಾಕಾರಗೊಳ್ಳುತ್ತಿದೆ. ರೈಲು ಮತ್ತು ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪನೆ ಸಂತಸದ ವಿಷಯವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಬಿ. ಶಶಿಧರ್ ಮಾತನಾಡಿ, ಸಮಾನತೆಯ ಹರಿಕಾರ ಹಾಗೂ ತಮ್ಮ ವಚನಗಳ ಮೂಲಕ ಸಮಸಮಾಜವನ್ನು ಸೃಷ್ಟಿಸಿದ ಮಹಾನಾಯಕ, ಯುಗಪುರುಷ ಬಸವೇಶ್ವರರ ಪುತ್ಥಳಿ ದರ್ಶನ ದಿನನಿತ್ಯ ಪಡೆಯುವುದು ಎಲ್ಲರ ಪುಣ್ಯವಾಗಿದೆ ಎಂದು ಹೇಳಿದರು.
ಹೇಮಾವತಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ, ಕಾಟಿಕೆರೆ ಉಮೇಶ್, ಮುರುಂಡಿ ಶಿವಯ್ಯ, ಕೆಟಿಸಿ ದಿವಾಕರ್, ಗಂಡಸಿ ಮಂಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಗಿರೀಶ್, ಧರ್ಮೇಶ್, ಗುತ್ತಿಗೆದಾರ ಕೃಷ್ಣ, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾಬಾಯಿ, ಮಾಜಿ ಉಪಾಧ್ಯಕ್ಷ ಶಾನೆಗೆರೆ ಬಾಬು, ಬೆಳಗುಂಬ ಜಯಣ್ಣ, ರೈತ ಸಂಘದ ಮುಖಂಡ ದಯಾನಂದ್, ನಗರಸಭೆ ಮಾಜಿ ಸದಸ್ಯರಾದ ವೆಂಕಟಮುನಿ, ಸುಬ್ರಮಣ್ಯ ಬಾಬು ಉಮಾಶಂಕರ್, ಮನು ಇತರರಿದ್ದರು.