ಅಗಿಲೆ ಯೋಗೇಶ್  
ಹಾಸನ

ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ
  • ಆಪ್ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ಮಾಹಿತಿ
ಹಾಸನ: ರಾಜ್ಯ ಸರ್ಕಾರ ಸಮಾವೇಶದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲು ನಿರ್ಧರಿಸಲಾಗಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಶನಿವಾರ ನಗರದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಸಮರ್ಪಣಾ ಸಮಾವೇಶ ಆಯೋಜಿಸಿತ್ತು. ಇದರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಾರ್ಯಕ್ರಮದ ಹಿನ್ನೆಲೆ ನಗರದಾದ್ಯಂತ ದೊಡ್ಡ ದೊಡ್ಡ ಕಟೌಟ್ ಹಾಕುವ ಮೂಲಕ ರಾಜಕೀಯ ನಾಯಕರ ಭಾವಚಿತ್ರ ಅಳವಡಿಸಲಾಗಿತ್ತು. ಆದರೆ, ಇದಕ್ಕಾಗಿ ಬಳಸಿರುವ ಹಣ ಯಾರ ಮನೆಯದ್ದು. ಜಿಲ್ಲಾಡಳಿತ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದು, ಕೋಟ್ಯಂತರ ರೂ. ಹಣವನ್ನು ವ್ಯಯಮಾಡಿದೆ. ಅಲ್ಲದೆ ಜನರನ್ನು ಕರೆಸುವ ಉದ್ದೇಶದಿಂದ ಸಾವಿರಾರು ಬಸ್‌ಗಳನ್ನು ಬಳಸಿಕೊಂಡಿದೆ. ಇದಕ್ಕೆ ನೀಡುವ ಹಣ ಯಾರ ಮನೆಯದ್ದು, ಈ ಎಲ್ಲ ಪ್ರಶ್ನೆಗಳಿಗೂ ಜಿಲ್ಲಾಡಳಿತ ಹಾಗೂ ಸರ್ಕಾರ ಉತ್ತರ ನೀಡಬೇಕಿದೆ. ಜನರು ಇದರ ಬಗ್ಗೆ ಯೋಚನೆ ಮಾಡಬೇಕು, ಯಾರ ಹಣದಿಂದ ಇಷ್ಟೆಲ್ಲ ಕಾರ್ಯಕ್ರಮ ಮಾಡಿ ವೈಭವೀಕರಿಸಲು ಹೊರಟಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು ಎಂದರು.
ಈ ರೀತಿಯ ಬ್ಯಾನರ್‌ಗಳನ್ನು ಅಳವಡಿಸಿ ಹಾಸನದಲ್ಲಿ ಆಡಂಬರದ ಸರ್ಕಾರಿ ಕಾರ್ಯಕ್ರಮ ಮಾಡಿದ ಉದಾಹರಣೆ ಇಲ್ಲ. ಇದಲ್ಲದೆ ಈ ರೀತಿಯ ಬ್ಯಾನರ್ ಅಳವಡಿಸಲು ಪರಿಸರ ಇಲಾಖೆಯ ವಿರೋಧವೂ ಇದೆ. ಆದರೂ ನಿಯಮ ಪಾಲಿಸಬೇಕಾಗಿರುವ ಜಿಲ್ಲಾಡಳಿತವೇ ನಿಯಮಬಾಹಿರ ಕೆಲಸ ಮಾಡಿರುವುದು ಖಂಡನೀಯ. ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಕುರಿತು ರಾಜ್ಯಪಾಲರಿಗೆ ದೂರು ನೀಡುತ್ತಿದ್ದೇನೆ. ಅಲ್ಲದೆ ಇದರ ಸಂಪೂರ್ಣ ಮಾಹಿತಿ ನೀಡುವಂತೆ ಆರ್‌ಟಿಐ ಮೂಲಕ ಜಿಲ್ಲಾಡಳಿತದಲ್ಲಿಯೂ ಮಾಹಿತಿ ಕೇಳಲಿದ್ದೇನೆ. ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಮಂಜುನಾಥ್, ಕಾರ್ಯಕರ್ತೆ ಶೋಭಾ ಇದ್ದರು.