ಡಾ.ಬಿ,ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಅಂಗವಾಗಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು. 
ಹಾಸನ

ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

ಬೇಲೂರು :ದೇಶಕ್ಕೆ ಹಾಗೂ ದೀನದಲಿತರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಡುಗೆ ಅಪಾರವಾಗಿದ್ದು, ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಡಾ.ಬಿ,ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆಯ ಅಂಗವಾಗಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಕರೆಯಲಾಗಿದ್ದ ದಲಿತ ಮುಖಂಡರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏ.14ರಂದು ಡಾ.ಅಂಬೇಡ್ಕರ್ ಜಯಂತಿಯನ್ನು ತಾಲೂಕು ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅಂದು ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳ ಸಂಪೂರ್ಣ ಸಹಕಾರ ದೊರೆಯಲಿದೆ. ಅಲ್ಲದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಏ.14 ರ ನಂತರದ ಪ್ರತ್ಯೇಕ ದಿನಾಂಕದಲ್ಲಿ ಸಚಿವರನ್ನು ಆಹ್ವಾನಿಸಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲು ದಲಿತ ಮುಖಂಡರನ್ನು ಒಳಗೊಂಡ ಸಮಿತಿ ರಚಿಸೋಣ. ಈ ಬಾರಿ ಡಾ.ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ಚುನಾವಣಾ ನೀತಿ ಸಂಹಿತೆಯ ಅಡೆತಡೆಗಳಿಲ್ಲದ ಕಾರಣ ಇಲಾಖೆಯಿಂದ ನಿಗದಿಯಾದ ಹಣದೊಂದಿಗೆ ಸಂಪನ್ಮೂಲ ಕ್ರೋಡೀಕರಿಸಿ ಅದ್ದೂರಿಯಾಗಿ ಜಯಂತಿ ಆಚರಿಸೋಣ ಎಂದರು.
ಇದೇ ಸಂದರ್ಭ ತಾಲೂಕಿನ ದಲಿತ ಮುಖಂಡರು ಡಾ.ಅಂಬೇಡ್ಕರ್ ಜಯಂತಿ ಆಚರಣೆ ಬಗ್ಗೆ ಸಲಹೆ ನೀಡಿದರು. ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ತಾಪಂ ಇಒ ಸತೀಶ್, ಅರಸೀಕೆರೆ ತಾಪಂ ಇಒ ಗಂಗಾಧರ್, ಬಿಇಒ ಭಾಗ್ಯಮ್ಮ, ಪಿ.ಐ.ರೇವಣ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗ್ರೇಡ್-1 ಲಿಂಗರಾಜು, ದಲಿತ ಮುಖಂಡ ಮರಿಯಪ್ಪ ಇತರರಿದ್ದರು.