ನಿಖಿಲ್ ಕುಮಾರಸ್ವಾಮಿ  
ಹಾಸನ

ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ನಿರ್ಧಾರ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ನಿರ್ಧಾರ
  • ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ
ಹಾಸನ: ಎಚ್.ಡಿ.ಕುಮಾರಸ್ವಾಮಿ ಅವರು ಮುಂದೆ ಮುಖ್ಯಮಂತ್ರಿ ಆಗುತ್ತಾರೋ, ಆಗಬೇಕೋ, ಬೇಡವೋ, ರಾಜ್ಯ ರಾಜಕಾರಣಕ್ಕೆ ಯಾವಾಗ ಬರಬೇಕು ಇವೆಲ್ಲವನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಕಾಲ ಬಂದಾಗ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಅರಕಲಗೂಡಿನ ಕೆಲಗಳಲೆ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ಬಗ್ಗೆ ಮಾಜಿ ಶಾಸಕ ಪ್ರೀತಮ್‌ಗೌಡ ವಿರೋಧ ಹಾಗೂ 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಎಂಬ ಜೆಡಿಎಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಶಿಸ್ತು ಪಾಲನೆ ಕಮಿಟಿ ಇರುತ್ತೆ. ಈ ಕಮಿಟಿ ಯಾರ‌್ಯಾರು ಪಕ್ಷದ ಅಶಿಸ್ತಿನ ನಡವಳಿಕೆಗೆ ಕಾರಣರಾಗುತ್ತಾರೋ ಅವರ ಬಗ್ಗೆ ಆಯಾ ಪಕ್ಷದ ಕಮಿಟಿಯಲ್ಲಿ ಇವೆಲ್ಲವೂ ತೀರ್ಮಾನ ಮಾಡುತ್ತಾರೆ. ಬೀದಿಯಲ್ಲಿ ನಿಂತು ಬೀದಿ ರಂಪಾಟ ಮಾಡಿಕೊಂಡು ಎರಡು ಪಕ್ಷದ ಕಾರ್ಯಕರ್ತರು, ನಾಯಕರು ಗೌರವ ಕಳೆದುಕೊಳ್ಳಬೇಡಿ ಎಂದು ಅವರ ಪಕ್ಷದಲ್ಲಿ ಬುದ್ಧಿ ಹೇಳುತ್ತಾರೆಂದು ನಂಬಿದ್ದೀನಿ. ಕಾದು ನೋಡೋಣ ಎಂದು ಹೇಳಿದರು.
ಜೆಡಿಎಸ್ ಪಕ್ಷದ ನಾಯಕತ್ವ ಹಿಡಿದಿರುವುದು ಕುಮಾರಣ್ಣ. ದೇವೇಗೌಡರ ಮಾರ್ಗದರ್ಶನ, ರೇವಣ್ಣ ಅವರ ರಾಜಕೀಯ ಶಕ್ತಿ ಬಹಳ ಪ್ರಬಲವಾಗಿದೆ. ಇವತ್ತಿಗೂ ಕುಮಾರಣ್ಣ ಕೊಟ್ಟಂತಹ ಆಡಳಿತದ ಬಗ್ಗೆ ಮಾತನಾಡುತ್ತಾರೆ. ಇವತ್ತಿನ ಈ ಸರ್ಕಾರದ ದುರಾಡಳಿತ, ಸರ್ಕಾರದ ಕೆಲವೊಂದು ನಡವಳಿಕೆ ನೋಡಿ ಜನರು ಬೇಸತ್ತಿದ್ದಾರೆ ಎಂದರು.
ಇಂತಹ ಸಂದರ್ಭದಲ್ಲಿ ಎಲ್ಲೇ ಹೋದರು ಜನ ಕುಮಾರಸ್ವಾಮಿ ರಾಜ್ಯದ ಚುಕ್ಕಾಣಿಯನ್ನು ಹಿಡಿಯಬೇಕೆಂಬ ಪ್ರಸ್ತಾಪಗಳು ನಡೆಯುತ್ತಿದೆ. ಅದಕ್ಕೆ ನಾನು ಸಾಕ್ಷಿ ಇದ್ದೇನೆ ಎಂದು ಹೇಳಿದರು.
2028ರಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಇದು ಬರೀ ಕಾರ್ಯಕರ್ತರ ಅಪೇಕ್ಷೆ ಅಲ್ಲ. ಜನರ ಭಾವನೆ ಕೂಡ ಅದೇ ಆಗಿದೆ. ನಮ್ಮದು ಪ್ರಾದೇಶಿಕ ಪಕ್ಷ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಹಿತ ದೃಷ್ಟಿಯಿಂದ ನಾವು, ಬಿಜೆಪಿ ಒಂದಾಗಿದ್ದೇವೆ. ರಾಜ್ಯದ ಜನತೆಯೂ ಅದಕ್ಕೆ ಪೂರಕವಾಗಿ ಲೋಕಸಭೆಗೆ 19 ಜನ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದರು.